ಬೆಂಗಳೂರು: ಹಾವೇರಿಯಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದೂರದರ್ಶನ ಚಂದನದ ಮುಖ್ಯಸ್ಥರಾಗಿ ಕಾರ್ಯಕ್ರಮದ ನೇರ ಪ್ರಸಾರ ಹಾಗೂ ವರದಿಗಾಗಿ ಬಂದಿದ್ದ ಶ್ರೀಮತಿ ನಿರ್ಮಲಾ ಯಲಿಗಾರ್ ಅವರಿಗೆ ಅವಮಾನ ಮಾಡಿದ ಮತ್ತು ಅವರ ಕಸಾಪ ಸದಸ್ಯತ್ವ ಅಮಾನತುಗೊಳಿಸಿದ ಕ್ರಮವನ್ನು ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ ಆಗ್ರಹಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಂಘದ ಅಧ್ಯಕ್ಷೆ, ಹಾವೇರಿಯಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದೂರದರ್ಶನ ಚಂದನದ ಮುಖ್ಯಸ್ಥರಾಗಿ ಕಾರ್ಯಕ್ರಮದ ನೇರ ಪ್ರಸಾರ ಹಾಗೂ ವರದಿಗಾಗಿ ಬಂದಿದ್ದ ಶ್ರೀಮತಿ ನಿರ್ಮಲಾ ಯಲಿಗಾರ ಅವರಿಗೆ ಹಾಗೂ ಅವರ ತಂಡಕ್ಕೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಡಬೇಕಾದ ಜವಾಬ್ದಾರಿ ಸಂಘಟಕರದ್ದಾಗಿತ್ತು. ಆದರೆ ಸಮರ್ಪಕ ವ್ಯವಸ್ಥೆಯನ್ನು ಮಾಡಿಕೊಡುವಲ್ಲಿ ಅವರು ಎಡವಿದ್ದಾರೆ ಎಂಬುದು ನಿರ್ವಿವಾದ. ಸ್ವತಃ ದೂರದರ್ಶನ ಚಂದನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿರುವ ಕಸಾಪದ ಅಧ್ಯಕ್ಷ ಮಹೇಶ ಜೋಶಿ ಅವರಿಗೆ ಮಾಧ್ಯಮ ವರದಿಗೆ ಬರುವವರಿಗೆ ಯಾವ ರೀತಿ ವ್ಯವಸ್ಥೆ ಮಾಡಿಕೊಡಬೇಕು ಎಂಬುದು ತಿಳಿಯದೆ ಇರುವ ವಿಚಾರವೇನಲ್ಲ. ಸಮರ್ಪಕ ವ್ಯವಸ್ಥೆ ಇಲ್ಲದಿರುವಾಗ, ಸಂಬಂಧಪಟ್ಟವರು ಸರಿಯಾಗಿ ಸ್ಪಂದಿಸದೆ ಇದ್ದಾಗ ಅನಿವಾರ್ಯವಾಗಿ ನಿರ್ಮಲಾ ಅವರು ಕಸಾಪ ರಾಜ್ಯ ಅಧ್ಯಕ್ಷ ಮಹೇಶ ಜೋಶಿಯವರ ಗಮನಕ್ಕೆ ಇದನ್ನು ತಂದಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸದ್ಯ ವಿಷಯ ಅಷ್ಟಕ್ಕೇ ನಿಂತಿದ್ದರೆ ಈ ಪತ್ರ ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ. ಮಾಧ್ಯಮದ ಉನ್ನತ ಅಧಿಕಾರಿಯೊಬ್ಬರ ಜತೆಯಲ್ಲಿ ಅಧ್ಯಕ್ಷರು ನಡೆದುಕೊಂಡ ರೀತಿಯ ಬಗ್ಗೆ ನಮ್ಮ ಸಂಘಕ್ಕೆ ಅಂದೇ ನೋವಾಗಿತ್ತು. ಆದರೆ ಸ್ವತಃ ನಿರ್ಮಲ ಅವರೇ ಈ ವಿಚಾರ ಬೆಳೆಸುವುದು ಬೇಡ ಎಂದ ಕಾರಣಕ್ಕೆ ಸಂಘ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಈಗ ಪರಿಷತ್ತಿನ ನಿಯಮ7(8)ರ ಅನ್ವಯ ಅಜೀವ ಸದಸ್ಯತ್ವ ಹೊಂದಿರುವ ನಿರ್ಮಲಾ ಯಲಿಗಾರ ಅವರ ಸದಸ್ಯತ್ವವನ್ನು ಅಮಾನತುಪಡಿಸುವ ನಿರ್ಧಾರವನ್ನು ಪರಿಷತ್ತು ಕೈಗೊಂಡಿರುವುದಕ್ಕೆ ಕರ್ನಾಟಕ ಪತ್ರಕರ್ತೆಯರ ಸಂಘ ಕಟುವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ನಿರ್ಮಲಾ ಅವರ ಕಸಾಪ ಅಜೀವ ಸದಸ್ಯತ್ವ ಅವರ ವೈಯಕ್ತಿಕ ವಿಚಾರವಾಗಿದ್ದು, ಸಮ್ಮೇಳನದಲ್ಲಿ ನಡೆದ ಮಾತಿನ ಚಕಮಕಿ ಅವರ ವೃತ್ತಿ ಬದುಕಿಗೆ ಸಂಬಂಧಿಸಿದ್ದಾಗಿದ್ದು, ಅಂದು ವ್ಯವಸ್ಥೆ ಸರಿ ಇರದಿರುವುದರ ಬಗ್ಗೆ ನಿರ್ಮಲಾ ದನಿ ಎತ್ತಿದ್ದಾರೆ. ಅದಕ್ಕಾಗಿ ಅವರ ಸದಸ್ಯತ್ವ ಅಮಾನತುಗೊಳಿಸುವುದು ಅವೈಜ್ಞಾನಿಕವಾಗಿದ್ದು, ತಕ್ಷಣವೇ ಈ ನಿರ್ಧಾರ ಕೈ ಬಿಡಬೇಕು ಎಂದು ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ ಆಗ್ರಹಿಸಿದ್ದಾರೆ.