ಹಾಸನ ಜಿಲ್ಲಾ ಬಿಜೆಪಿ ಮುಖಂಡರಿಗೆ ಮಾನ ಮರ್ಯಾದೆ ಏನೂ ಇಲ್ಲ: ಪ್ರೀತಂಗೌಡ ವಿರುದ್ಧ ರೇವಣ್ಣ ಪರೋಕ್ಷ ವಾಗ್ದಾಳಿ

Prasthutha|

ಹಾಸನ ; ಹಾಸನ ಜಿಲ್ಲೆಯ ಬಿಜೆಪಿ ಮುಖಂಡರಿಗೆ ಮಾನ ಮರ್ಯಾದೆ ಏನೂ ಇಲ್ಲ. ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು ಅಡಿಗಲ್ಲು ಹಾಕಿದ್ದ ವಿಮಾನ ನಿಲ್ದಾಣಕ್ಕೆ ಮತ್ತೆ ಅಡಿಗಲ್ಲು ಹಾಕೋಕೆ ಹೊರಟಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ಶಾಸಕ ಪ್ರೀತಂಗೌಡ ವಿರುದ್ಧ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ವಾಗ್ದಾಳಿ ಮಾಡಿದ್ದಾರೆ.

- Advertisement -

ಹಾಸನದಲ್ಲಿ ಮಾತನಾಡಿದ ಅವರು ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಗೊತ್ತಿದೆಯೋ ಇಲ್ವೋ ನನಗೆ ಗೊತ್ತಿಲ್ಲ. ಅಡಿಗಲ್ಲು ಹಾಕಿದ ಬಳಿಕ 5 ವರ್ಷ ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು. ಕೆಲಸ ಮತ್ತೆ ಪುನಾರಂಭವಾಗಿ 1 ವರ್ಷ ಕಳೆದರು ಅಡಿಗಲ್ಲು ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.

ಆಸ್ಪತ್ರೆ ಕಟ್ಟಡ ನಿರ್ಮಾಣ ಇನ್ನೂ ಮುಗಿದಿಲ್ಲ, ಉದ್ಘಾಟನೆಗೆ ಹೊರಟಿದ್ದಾರೆ. ಬರುವ ಚುನಾವಣೆಯಲ್ಲಿ 140 ಸ್ಥಾನಗಳನ್ನು ಗೆಲ್ಲುತ್ತಾರೆ ಅಂತ ಹೇಳಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅವರೇ ಉದ್ಘಾಟನೆ ಮಾಡಿಕೊಳ್ಳಲಿ. ನಾನು ಜಾರಿಗೆ ತಂದಿದ್ದ ಯೋಜನೆಗೆ ಅಡಿಗಲ್ಲು ಹಾಕಲು ಮುಂದಾಗಿದ್ದಾರೆ. ಹಾಗೇನಾದರೂ ಮಾಡಲು ಮುಂದಾದರೇ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

- Advertisement -

ಚುನಾವಣೆ ಸಮೀಪಿಸುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಚೆಕ್ ವಿತರಣೆ ಮಾಡುತ್ತಿದ್ದಾರೆ. ಹಳೆಯ ಚೆಕ್​ ಆಗ ಕೊಡದೆ ಈಗ ಕೊಡುತ್ತಿದ್ದಾರೆ. ನಾವು ಉಗ್ರ ಹೋರಾಟ ಮಾಡುತ್ತೇವೆ, ಅದೇನಾಗುತ್ತೋ ನೋಡೋಣ. ಸಚಿವರು ಕೊಟ್ಟಿರುವ ಎಣ್ಣೆ ಅಂಗಡಿ ಬೇಕಿದ್ದರೇ ಉದ್ಘಾಟನೆ ಮಾಡಿಕೊಳ್ಳಲಿ. ಎಣ್ಣೆ ಅಂಗಡಿ ಮಾಲೀಕರ ಪಾದದಡಿಯಲ್ಲಿ ಬಿಜೆಪಿ ಇದೆ. ಕಾನೂನು ಬಾಹಿರವಾಗಿ 2 ರಿಂದ 3 ಕೋಟಿ ರೂ. ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.

ಹಾಸನಕ್ಕೆ ತಾಂತ್ರಿಕ ವಿಶ್ವವಿದ್ಯಾಲಯ ಕೊಡಿ ನಾವೆ ನಿಮಗೆ ಹಾರ ಹಾಕುತ್ತೇವೆ. ತೋಟಗಾರಿಕೆ ಕಾಲೇಜು ಮಾಡಿ ನಾವೇ ಸನ್ಮಾನ ಮಾಡುತ್ತೇವೆ. ವಿಶ್ವೇಶ್ವರಯ್ಯ ನಿಗಮದ ಅಧ್ಯಕ್ಷ 5 ವರ್ಷ ಸಂಬಳವನ್ನೇ ಪಡೆದಿಲ್ಲ. ಸಿಎಂ ಬೊಮ್ಮಾಯಿ ಅವರ ಬಗ್ಗೆ ನನಗೆ ಗೌರವ ಇದೆ, ಅವರು ಜಿಲ್ಲೆಗೆ ಬರಲು ಬೇಡ ಅನ್ನಲ್ಲ. ಮಾಜಿ ಸಿಎಂ ಯಡಿಯೂರಪ್ಪ ಅವರು ಅಧಿಕಾರದಿಂದ ಇಳಿಯುವಾಗ ಹೇಳಿದರು ನಾನು ಹಾಸನಕ್ಕೆ ಅನುದಾನ ಕೊಟ್ಟಿಲ್ಲ ಎಂದು. ಹೀಗಿದ್ದರೇ ಇವರು ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಾರೆ ಎಂದು ಗುಡುಗಿದ್ದಾರೆ.



Join Whatsapp