ಕೊಲ್ಕತಾ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಆಘಾತ ಎದುರಾಗಿದ್ದು, ತಮ್ಮ ಸರಕಾರದ ಮತ್ತೋರ್ವ ಸಚಿವರು ರಾಜೀನಾಮೆ ನೀಡಿದ್ದಾರೆ. ಯುವಸೇವೆಗಳು ಮತ್ತು ಕ್ರೀಡಾ ಇಲಾಖೆ ರಾಜ್ಯ ಸಚಿವರಾಗಿದ್ದ ಲಕ್ಷ್ಮಿ ರತನ್ ಶುಕ್ಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ.
ಈಗಾಗಲೇ ಕೆಲವು ಟಿಎಂಸಿ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ನಡುವೆ, ಟಿಎಂಸಿಗೆ ಈ ರೀತಿಯ ಹಿನ್ನಡೆಯಾಗುತ್ತಿದೆ.
ಮಾಜಿ ಕ್ರಿಕೆಟಿಗರೂ ಆದ ಲಕ್ಷ್ಮಿ ರತನ್ ಶುಕ್ಲಾ ಇಂದು ಹೌರಾದಲ್ಲಿರುವ ಟಿಎಂಸಿ ಕಚೇರಿಗೆ ತೆರಳಿ, ಟಿಎಂಸಿ ಜಿಲ್ಲಾಧ್ಯಕ್ಷರಿಗೆ ತಮ್ಮ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಮಮತಾ ಬ್ಯಾನರ್ಜಿ ಸರಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಎರಡನೇ ಸಚಿವ ಲಕ್ಷಿ ರತನ್ ಶುಕ್ಲಾ. ಇದಕ್ಕೂ ಮೊದಲು ಸುವೇಂದು ಅಧಿಕಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಳಿಕ ಪಕ್ಷಕ್ಕೂ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದರು.