ಹಂಪನಕಟ್ಟೆ ಜಂಕ್ಷನ್’ನಲ್ಲಿ ಬ್ಯಾರಿಕೇಡ್ ಅಳವಡಿಸಿ ಸಂಚಾರ ಮಾರ್ಗದಲ್ಲಿ ಪ್ರಾಯೋಗಿಕ ಬದಲಾವಣೆ: ಪೊಲೀಸ್ ಕಮಿಷನರ್

Prasthutha|

ಮಂಗಳೂರು: ನಗರದ ಪ್ರಮುಖ ಜಂಕ್ಷನ್’ಗಳಲ್ಲಿ ಒಂದಾದ ಹಂಪನಕಟ್ಟೆ ಜಂಕ್ಷನ್’ನಲ್ಲಿ ಅತೀ ವಾಹನ ದಟ್ಟಣೆ ಹಾಗೂ ಹೆಚ್ಚು ಪಾದಚಾರಿಗಳ ಚಲನೆಯಿಂದ ಕೂಡಿದ್ದು, ಈ ಜಂಕ್ಷನ್’ನಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಿ ವಾಹನಗಳ ಸುಗಮ ಸಂಚಾರ ಮತ್ತು ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಹಂಪನಕಟ್ಟ ಜಂಕ್ಷನ್’ನ ಮಧ್ಯದಲ್ಲಿ ಬ್ಯಾರಿಕೇಡ್ ಅಳವಡಿಸಿ ಸಂಚಾರ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಬದಲಾವಣೆ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಪ್ರಾಯೋಗಿಕ ಮಾರ್ಗ ಬದಲಾವಣೆ ಈ ಕೆಳಗಿನಂತಿದೆ:

  1. ಕ್ಲಾಕ್ ಟವರ್ ಕಡೆಯಿಂದ ಫಳ್ನೀರ್ ರಸ್ತೆ (ಮದರ್ ಥೆರೇಸಾ ರಸ್ತೆ) ಕಡೆಗೆ ಹೋಗುವ ಎಲ್ಲಾ ವಾಹನಗಳು ಇನ್ನು ಮುಂದೆ ಹಂಪನಕಟ್ಟ ಸರ್ಕಲ್’ನಲ್ಲಿ ನೇರವಾಗಿ ಮೂಲ್ಯ ಸುಂದರ್ ರಾಮ್ ಶೆಟ್ಟಿ ರಸ್ತೆಯಲ್ಲಿ ಚಲಿಸಿ, ಜೋಸ್ ಅಲುಕಾಸ್ ಎದುರು U ಟರ್ನ್ ಪಡೆದು ವಾಪಸು ಹಂಪನಕಟ್ಟ ಜಂಕ್ಷನ್’ಗೆ ಬಂದು ಎಡಕ್ಕೆ ತಿರುಗಿ (ಫ್ರೀ ಲೆಫ್ಟ್) ಫಳ್ನೀರ್ ರಸ್ತೆ (ಮದರ್ ಥೆರೇಸಾ ರಸ್ತೆ) ಕಡಗೆ ಸಂಚರಿಸಬಹುದಾಗಿದೆ.
  2. ಫಳ್ನೀರ್ ರಸ್ತೆ (ಮದರ್ ಥೆರೇಸಾ ರಸ್ತೆ) ಕಡೆಯಿಂದ ನವಭಾರತ್ ಸರ್ಕಲ್ ಕಡೆಗೆ ಹೋಗುವ ವಾಹನಗಳು ಹಂಪನಕಟ್ಟ ಸರ್ಕಲ್’ನಲ್ಲಿ ಎಡಕ್ಕೆ ತಿರುಗಿ (ಫ್ರೀ ಲೆಫ್ಟ್) ಕ್ಲಾಕ್ ಟವರ್ ಕಡೆಗೆ ಚಲಿಸಿ ಕ್ಲಾಕ್ ಟವರ್ ಜಂಕ್ಷನ್’ನಲ್ಲಿ U ಟರ್ನ್ ತೆಗೆದು ಹಂಪನಕಟ್ಟ ಜಂಕ್ಷನ್’ಗೆ ಬಂದು ಎಡಕ್ಕೆ ತಿರುಗಿ (ಫ್ರೀ ಲೆಫ್ಟ್) ನವಭಾರತ್ ಸರ್ಕಲ್ ಕಡೆಗೆ ಸಂಚರಿಸಬಹುದಾಗಿದೆ.
  3. ನವಭಾರತ್ ಸರ್ಕಲ್ ಕಡೆಯಿಂದ ಕ್ಲಾಕ್ ಟವರ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಪಂಜೆ ಮಂಗೇಶ್ವರ ರಾವ್ ರಸ್ತೆಯ (ಪಿ.ಎಂ.ರಾವ್) ಮೂಲಕ ಚಲಿಸಿ, ಗಣಪತಿ ಹೈಸ್ಕೂಲ್ ರಸ್ತೆ (ಜಿಎಚ್’ಎಸ್) ಮೂಲಕ ಕೃಷ್ಣಭವನಕಟ್ಟೆ ಜಂಕ್ಷನ್ (ಕೆ.ಬಿ.ಕಟ್ಟಿ) ತಲುಪಿ, ಅಲ್ಲಂದ ಕ್ಲಾಕ್ ಟವರ್ ಕಡೆಗೆ ಸಂಚರಿಸಬಹುದಾಗಿದೆ. ಹಾಗೆಯೇ ನವಭಾರತ್ ಸರ್ಕಲ್ ಕಡೆಯಿಂದ ಫಳ್ನೀರ್ ರಸ್ತೆ (ಮದರ್ ಥೆರೇಸಾ ರಸ್ತೆ) ಕಡೆಗೆ ಹೋಗುವ ವಾಹನಗಳು ಹಂಪನಕಟ್ಟ ಜಂಕ್ಷನ್’ನಲ್ಲಿ ಎಡ ತಿರುವು (ಫ್ರೀ ಲೆಫ್ಟ್) ಪಡೆದು ಮೂಲ್ಯ ಸುಂದರ್ ರಾಮ್ ಶೆಟ್ಟಿ ರಸ್ತೆಯಲ್ಲಿ ಚಲಿಸಿ ಜೋಸ್ ಅಲುಕಾಸ್ ಎದುರು U ಟರ್ನ್ ಪಡೆದು ಹಂಪನಕಟ್ಟ ಜಂಕ್ಷನ್’ಗೆ ಬಂದು ಎಡಕ್ಕೆ ತಿರುಗಿ (ಫ್ರೀ ಲೆಫ್ಟ್) ಫಳ್ನೀರ್ (ಮದರ್ ಥೆರೇಸಾ ರಸ್ತೆ) ಕಡಗೆ ಹಾಗೂ ನೇರವಾಗಿ ಕ್ಲಾಕ್’ ಟವರ್ ಕಡೆಗೆ ಸಂಚರಿಸಬಹುದಾಗಿದೆ.
  4. ಹಂಪನಕಟ್ಟ ಜಂಕ್ಷನ್’ನಲ್ಲಿ ಪಾದಚಾರಿಗಳ ಸುರಕ್ಷತಾ ಸಂಚಾರಕ್ಕೆ ಪಾದಚಾರಿಗಳ ಮಾರ್ಗ (Zebra Cross)ಅನ್ನು ಗುರುತಿಸಿದ್ದು ಪಾದಚಾರಿಗಳು ಕಡ್ಡಾಯವಾಗಿ ಪಾದಚಾರಿಗಳ ಮಾರ್ಗಗಳನ್ನು ಉಪಯೋಗಿಸಬೇಕು.
    ಸಾರ್ವಜನಿಕರಿಗೆ ವಿಶೇಷ ಸೂಚನೆ: ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣ ಹಾಗೂ ನಗರ ಸರ್ವಿಸ್ ಬಸ್ ನಿಲ್ದಾಣದಿಂದ ಹೊರಡುವ ಬಸ್ಸುಗಳಿಗೆ ಕೆ.ಬಿ ಕಟ್ಟೆ ಬಸ್ಸು ನಿಲ್ದಾಣದ ನಂತರ ಜೋಸ್ ಅಲುಕಾಸ್ ಎದುರಿನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ಸುಗಳನ್ನು ಹತ್ತಲು ಅನುವು ಮಾಡಲಾಗಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಈ ಬಸ್ಸು ನಿಲ್ದಾಣಗಳನ್ನು ಹೊರತುಪಡಿಸಿ ಹಂಪನಕಟ್ಟೆಯ ಬಳಿ ಬಸ್ಸನ್ನು ಹತ್ತಲು ನಿಲ್ಲದೇ ಕೆ.ಬಿ ಕಟ್ಟೆ ಅಥವಾ ಜೋಸ್ ಅಲುಕಾಸ್ ಬಸ್ ನಿಲ್ದಾಣಗಳನ್ನೇ ಉಪಯೋಗಿಸಬೇಕು ಎಂದು ಎಂದು ಆಯುಕ್ತರು ಮನವಿ ಮಾಡಿದರು.


Join Whatsapp