ಬೆಳಗಾವಿ: ತಮಗೆ ರಾಜಕೀಯ ಜೀವದಾನ ನೀಡಿದ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಕಡೆಗಣಿಸಿದವರು ನರೇಂದ್ರ ಮೋದಿ ಅವರಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇಂದು ಬೆಳಗಾವಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಸಾಧನೆಗಳ ಆಧಾರದಲ್ಲಿ ಮತ ಯಾಚಿಸಲಾಗದೆ ಪ್ರಧಾನಿ ಮೋದಿಯವರು ‘ಮರ್ ಜಾ ಮೋದಿ’ ಎಂದು ಕಾಂಗ್ರೆಸ್ ನವರು ಘೋಷಣೆ ಕೂಗುತ್ತಿದ್ದಾರೆ ಎಂದು ಅನುಕಂಪ ಗಳಿಸಲು ನಾಟಕ ಮಾಡುತ್ತಿರುವುದು ದುರದೃಷ್ಟಕರ ಎಂದು ಕಿಡಿಕಾರಿದರು.
ಮರ್ ಜಾ ಮೋದಿ ಎಂದು ಯಾರು, ಎಲ್ಲಿ ಕೂಗಿದ್ದರು ಎನ್ನುವುದನ್ನು ಮೋದಿಯವರು ಬಹಿರಂಗ ಪಡಿಸಬೇಕು. ಇಂಟಲಿಜೆನ್ಸ್, ಪೊಲೀಸ್, ತನಿಖಾ ಸಂಸ್ಥೆಗಳು ಎಲ್ಲವೂ ಕೈಯಲ್ಲಿರುವಾಗ ಸಾಯಲು ಹೇಳಿದವರನ್ನು ಎಳೆದು ತಂದು ಜೈಲಿಗೆ ಹಾಕಲು ಏನು ಅಡ್ಡಿ ಇದೆ? ಈ ದೇಶದಲ್ಲಿ ಒಬ್ಬ ಪ್ರಧಾನಿಗೆ ರಕ್ಷಣೆ ಇಲ್ಲ ಎಂದಾದರೆ ಇನ್ನು ಈ ಸಾಮಾನ್ಯ ಜನರಿಗೆ ಹೇಗೆ ರಕ್ಷಣೆ ನೀಡುತ್ತಾರೆ? ಇನ್ನು ಯಾಕೆ ಹಾಗೆ ಕೂಗಿದರವರ ಮೇಲೆ ಕ್ರಮ ತೆಗೆದುಕೊಂಡಿಲ್ಲ? ಇವೆಲ್ಲ ಅನುಕಂಪ ಗಳಿಸಲು ಮಾಡುತ್ತಿರುವ ಗಿಮಿಕ್ ಗಳಷ್ಟೆ. ಜನರು ಮೂರ್ಖರಲ್ಲ, ಅವರಿಗೆ ಈ ನಾಟಕ ಅರ್ಥವಾಗುತ್ತದೆ ಎಂದರು.
ಟಿಪ್ಪುವಿನಂತೆ ನನ್ನನ್ನೂ ಹೊಡೆದುಹಾಕಬೇಕು ಎಂದು ಹತ್ಯೆಗೆ ಪ್ರಚೋದಿಸಿದ್ದ ಸಚಿವ ಡಾ.ಅಶ್ವಥ್ ನಾರಾಯಣ್ ಅವರಿಗೆ ಪ್ರಧಾನಿ ಮೋದಿಯವರು ತಲೆಗೆ ಕುಟ್ಟಿ ಬುದ್ದಿ ಹೇಳಬಹುದು ಎಂದು ಅಂದ್ಕೊಂಡಿದ್ದೆ. ಆದರೆ ಅವರು ತನ್ನನ್ನು ಮರ್ ಜಾ ಎಂದು ಹೇಳುತ್ತಿದ್ದಾರೆ ಎಂದು ಅನುಕಂಪಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ ಎಂದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಅವಮಾನಿಸುತ್ತಿದೆ ಎಂದು ಪ್ರಧಾನಿ ಮೋದಿಯವರು ಕಣ್ಣೀರು ಹಾಕುತ್ತಿದ್ದಾರೆ. ಇವರು ಕಡೆಗಣಿಸಿದ ನಾಯಕರು ಒಬ್ಬರು, ಇಬ್ಬರೇ? ಗುಜರಾತ್ ಗಲಭೆ ನಿಯಂತ್ರಿಸಲಾಗದ ನರೇಂದ್ರಮೋದಿಯವರನ್ನು ಕಿತ್ತುಹಾಕಲು ಆಗಿನ ಪ್ರಧಾನಿ ಅಟಲಬಿಹಾರಿ ವಾಜಪೇಯಿ ನಿರ್ಧರಿಸಿದ್ದರು. ಆಗ ಇವರನ್ನು ರಕ್ಷಿಸಿದ್ದು ಲಾಲ್ ಕೃಷ್ಣ ಅಡ್ವಾಣಿ. ಅಂತಹ ಹಿರಿಯನನ್ನೇ ಮೂಲೆಗೆ ತಳ್ಳಿರುವ ಮೋದಿಯವರಿಗೆ ಇತರರಿಗೆ ಉಪದೇಶ ಮಾಡುವ ಯಾವ ನೈತಿಕತೆ ಇದೆ ಎಂದರು.
ಬಿಜೆಪಿಯಲ್ಲಿಯೇ ನರೇಂದ್ರ ಮೋದಿಯವರು ಕಡೆಗಣಿಸಿದ ನಾಯಕರು ಒಬ್ಬರು, ಇಬ್ಬರೇ? ಅಟಲಬಿಹಾರಿ ವಾಜಪೇಯಿ,ಅಡ್ವಾಣಿ, ಮುರಳಿ ಮನೋಹರ ಜೋಷಿ, ಜಸ್ವಂತ್ ಸಿಂಗ್ ಮಾತ್ರವಲ್ಲ ತಮ್ಮದೇ ರಾಜ್ಯದ ಹಿರಿಯ ಬಿಜೆಪಿ ನಾಯಕ ಕೇಶುಭಾಯಿ ಪಟೇಲ್ ಅವರಿಗೆ ಮೋದಿಯವರು ಮಾಡಿದ್ದ ಅವಮಾನ ಏನು ಕಡಿಮೆಯೇ? ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಜೈಲಿಗೆ ಹೋಗಿದ್ದು ಎನ್ನುವುದು ನೆನಪಿರಲಿ. ಕೊನೆಗೆ ಅವರು ಪಕ್ಷವನ್ನೇ ಬಿಟ್ಟುಹೋಗುವಂತೆ ಮಾಡಿದ್ದು ಯಾರು? ಪಕ್ಷ ತೊರೆದು ಹೋದ ಅವರನ್ನು ತುಚ್ಚೀಕರಿಸಿ ಹಿಂಸಿಸಿದ್ದು ಯಾರು? ಅವರೆಲ್ಲರೂ ಮೋದಿಯವರ ಶಿಷ್ಯರೇ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ನರೇಂದ್ರ ಮೋದಿಯವರಿಂದ ಹಿಡಿದು ರಾಜ್ಯದ ಬಿಜೆಪಿ ನಾಯಕರ ವರೆಗೆ ಈಗ ಎಲ್ಲರೂ ಬಿ.ಎಸ್.ಯಡಿಯೂರಪ್ಪನವರನ್ನು ಹಾಡಿ ಹೊಗಳುತ್ತಿರುವುದು ಅವರ ಮೇಲಿನ ಪ್ರೀತಿಯಿಂದ ಖಂಡಿತ ಅಲ್ಲ. ಲಿಂಗಾಯತ ಮತಬ್ಯಾಂಕ್ ಮೇಲೆ ಕಣ್ಣಿಟ್ಟು ಮೋದಿ ಮತ್ತು ಬಳಗ ಈ ನಾಟಕ ಮಾಡುತ್ತಿದೆ. ಇದನ್ನು ಅರ್ಥಮಾಡಿಕೊಳ್ಳುವಷ್ಟು ಶಕ್ತಿ ಸಾಮರ್ಥ್ಯ ಲಿಂಗಾಯತ ಸಮುದಾಯಕ್ಕಿದೆ. ರಾಜ್ಯದಲ್ಲಿ ಬಿಜೆಪಿಗೆ ಮತ ತಂದುಕೊಡುವ ಯಾವ ನಾಯಕರ ಮುಖವೂ ಇಲ್ಲ ಎಂದು ನರೇಂದ್ರಮೋದಿಯವರಿಗೆ ಮನವರಿಕೆಯಾಗಿದೆ. ಅದೇ ರೀತಿ ತನ್ನ ಮುಖ ತೋರಿಸಿದರೂ ಹಿಂದಿನಂತೆ ಜನ ಮತಹಾಕುವುದಿಲ್ಲ ಎನ್ನುವುದು ಖಾತರಿಯಾಗಿದೆ. ಅದಕ್ಕೆಲ್ಲ ಈ ನಾಟಕ ಮಾಡುತ್ತಿದ್ದಾರೆ. ಕರ್ನಾಟಕದ ನಾಯಕರನ್ನು ಕಾಂಗ್ರೆಸ್ ಅವಮಾನಿಸಿದೆ ಎಂದು ಅನುಕಂಪ ತೋರುತ್ತಿರುವ ಪ್ರಧಾನಿ ಮೋದಿಯವರು ರಾಜ್ಯದಿಂದ ಆರಿಸಿಹೋಗಿರುವ ಬಿಜೆಪಿಯ 25 ಸಂಸದರನ್ನು ಹೇಗೆ ನಡೆಸಿಕೊಂಡಿದ್ದಾರೆ? ಅವರೇನು ಕರ್ನಾಟಕದವರಲ್ಲವೇ? ಮೋದಿಯವರು ಅವರನ್ನು ಎಂದಾದರೂ ತಮ್ಮೆದುರು ತಲೆ ಎತ್ತಿ ಮಾತನಾಡಲು ಬಿಟ್ಟಿದ್ದರಾ? “ನಾನು ಬದುಕಿರುವ ವರೆಗೆ ಕಾಂಗ್ರೆಸ್ ಏನೂ ಮಾಡಲು ಸಾಧ್ಯವಿಲ್ಲ” ಎಂಬ ನರೇಂದ್ರಮೋದಿಯವರ ಆತ್ಮರತಿಯ ಮಾತುಗಳನ್ನು ಕೇಳಿ ನಗುಬರುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಪ್ರಧಾನಿಯಾಗಿ ಬಂದು ವ್ಯಾಪಕ ಪ್ರಚಾರ ನಡೆಸಿದರೂ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಬಂದಿರಲಿಲ್ಲ, ಮುಂದೆಯೂ ಬರುವುದಿಲ್ಲ. ನಾಲ್ಕು ದಿನಕ್ಕೊಮ್ಮೆ ರಾಜ್ಯಕ್ಕೆ ಹಾರಿ ಬರುತ್ತಿರುವ ನರೇಂದ್ರ ಮೋದಿಯವರ ಹತಾಶೆಯಲ್ಲಿಯೇ ಸೋಲಿನ ಸೂಚನೆ ಇದೆ ಎಂದರು.
ಕರ್ನಾಟಕದ ನಾಯಕರನ್ನು ಕಾಂಗ್ರೆಸ್ ಅವಮಾನಿಸುತ್ತಿದೆ ಎಂದು ಗೋಳಾಡುತ್ತಿರುವ ನರೇಂದ್ರ ಮೋದಿಯವರು ಸಾರ್ವಜನಿಕ ಸಭೆಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿಯವರ ಅವರ ಹೆಸರನ್ನೇ ಹೇಳದೆ ಸಾರ್ವ ಜನಿಕವಾಗಿ ಅವಮಾನಿಸುತ್ತಿರುವುದು ಸರಿಯೇ? ಅವರು ಬಿಜೆಪಿಗೆ ಸೇರಿರುವವರಾಗಿರಬಹುದು, ಆದರೆ ಅವರು ರಾಜ್ಯಕ್ಕೆ ಮುಖ್ಯಮಂತ್ರಿ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.