ನವದೆಹಲಿ: ದೆಹಲಿಯಲ್ಲಿ ವಿಶ್ವ ಪುಸ್ತಕ ಹಬ್ಬ ನಡೆಯುತ್ತಿದ್ದು, ಅಲ್ಲಿನ ಕ್ರಿಶ್ಚಿಯನ್ನರ ಪುಸ್ತಕ ಮಳಿಗೆಯೊಂದಕ್ಕೆ ನುಗ್ಗಿದ ಸಂಘಪರಿವಾರದ ದುಷ್ಕರ್ಮಿಗಳು, ಜೈ ಶ್ರೀರಾಂ ಎಂದು ಕೂಗುತ್ತಾ ಮಳಿಗೆಯನ್ನೆಲ್ಲ ಕೆಡವಿ ಕೇಕೆ ಹಾಕಿ ದಾಂಧಲೆವೆಬ್ಬಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಗೈಡಿಯೋನ್ಸ್ ಇಂಟರ್ ನ್ಯಾಷನಲ್ ಎಂಬ ಎವಾಂಜಲಿಕಲ್ ಕ್ರಿಶ್ಚಿಯನ್ ಅಸೋಸಿಯೇಶನ್ನಿಗೆ ಸೇರಿದ ಮಳಿಗೆಯೆದುರು ಕೆಲವರು ಜೈ ಶ್ರೀ ರಾಂ, ಹರ್ ಹರ್ ಮಹಾದೇವ್, ಭಾರತ್ ಮಾತಾಕಿ ಜೈ ಎಂದು ಕೂಗುತ್ತಿರುವ ವೀಡಿಯೋ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಅಲ್ಲಿ ಉಚಿತವಾಗಿ ಮಿನಿ ಬೈಬಲ್ ಕೊಡುತ್ತಿದ್ದರು ಎಂದು ಆರೋಪ ಮಾಡಿ ಈ ಕೃತ್ಯವೆಸಗಲಾಗಿದೆ.
ಈ ಪುಸ್ತಕ ದ್ವೇಷಿ ದಾಳಿಯು ಮಧ್ಯಾಹ್ನ ಎರಡೂ ಕಾಲು ಗಂಟೆ ಸುಮಾರಿಗೆ ನಡೆದಿದೆ ಎಂದು ತಿಳಿದುಬಂದಿದೆ.
ಕೆಲವರು ಪ್ರತಿಭಟನೆ ಮಾಡಿದರು ಅಷ್ಟೆ ಯಾವುದೇ ಹಿಂಸಾಚಾರ, ಪುಸ್ತಕ ಹರಿಯುವುದೆಲ್ಲ ನಡೆದಿಲ್ಲ ಎಂಬುದು ಪೊಲೀಸರ ಹೇಳಿಕೆ.
ಉಚಿತ ಬೈಬಲ್ ನೀಡಿ ಜನರನ್ನು ಮತಾಂತರ ಮಾಡುವುದನ್ನು ನಿಲ್ಲಿಸಿ ಎಂದು ಪ್ರತಿಭಟನಕಾರರು ಕೂಗಿದ್ದಾಗಿಯೂ ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಆ ಪುಸ್ತಕ ಮಳಿಗೆಯ ಬ್ಯಾನರ್’ಗಳನ್ನು, ಪೋಸ್ಟರ್’ಗಳನ್ನು ಅವರು ಹರಿದು ಹಾಕಿದ್ದಾರೆ.
ಪ್ರತಿಭಟನಕಾರರು ಅರ್ಧ ಗಂಟೆಯಷ್ಟು ಕಾಲ ಆ ಮಳಿಗೆಯ ಸುತ್ತ ಕುಳಿತು ಹನುಮಾನ್ ಚಾಲಿಸಾ ಪಠಿಸಿದರು ಮತ್ತು ಜಾಗ ಬಿಡಲು ನಿರಾಕರಿಸಿದರು ಎಂದು ನ್ಯೂಸ್ ಲಾಂಡ್ರಿ ವರದಿ ಮಾಡಿದೆ.
ಕಾರ್ಯಕರ್ತರು ಪುಸ್ತಕ ಹಬ್ಬ ಸಂಘಟಕರಿಗೆ ದೂರು ನೀಡಿದಾಗ, ಇಲ್ಲಿ ಧಾರ್ಮಿಕ ಪುಸ್ತಕ ಉಚಿತವಾಗಿ ಹಂಚಬೇಡಿ ಎಂದು ಅವರು ತಿಳಿಸಿದ್ದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಇದು ಸಂಘಟಿತ ಹೋರಾಟವಾಗಿರಲಿಲ್ಲ ಎಂದು ವಿಶ್ವ ಹಿಂದೂ ಪರಿಷತ್ತಿನ ವಕ್ತಾರರು ತಿಳಿಸಿದ್ದಾರೆ.
ಈ ಪುಸ್ತಕ ಹಬ್ಬದಲ್ಲಿ ಹಿಂದೂ, ಮುಸ್ಲಿಂ, ಸಿಖ್ ಧರ್ಮೀಯರ ಪುಸ್ತಕ ಮಳಿಗೆಗಳೂ ಇದ್ದು, ಅಲ್ಲೂ ಉಚಿತ ಪುಸ್ತಕ ಹಂಚಿಕೆ ನಡೆದಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.