ಮಂಗಳೂರು: ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪತ್ರಿಕಾ ಭವನ ಟ್ರಸ್ಟ್ ಸಹಯೋಗದಲ್ಲಿ ಪ್ರೆಸ್ ಕ್ಲಬ್ ದಿನಾಚರಣೆ, ಮಂಗಳೂರು ಪ್ರೆಸ್ ಕ್ಲಬ್ ವರ್ಷದ ಪ್ರಶಸ್ತಿ- 2022 ಪ್ರದಾನ ಮತ್ತು ಹಿರಿಯ ಪತ್ರಕರ್ತರಿಗೆ ಪ್ರೆಸ್ ಕ್ಲಬ್ ಗೌರವ ಪುರಸ್ಕಾರ ಸಮಾರಂಭ ಮಾ.5ರಂದು ಬೆಳಗ್ಗೆ 10 ಗಂಟೆಗೆ ಬೋಳೂರು ಕುಡ್ಲ ಕುದ್ರು- ಪ್ಯಾರಡೈಸ್ ಐಲ್ಯಾಂಡ್’ನಲ್ಲಿ ನಡೆಯಲಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಕೆ. ಸದಾಶಿವ ಶೆಣೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಅಧ್ಯಕ್ಷತೆ ವಹಿಸಲಿದ್ದಾರೆ. ಬೀಡಾಡಿ ಮೂಕ ಪ್ರಾಣಿಗಳಿಗೆ ಅನ್ನಾಹಾರ ಹಾಕಿ ಪೋಷಿಸುತ್ತಿರುವ ರಜನಿ ಶೆಟ್ಟಿಯವರಿಗೆ ಪ್ರೆಸ್ ಕ್ಲಬ್ ಪ್ರಶಸ್ತಿಯನ್ನು ಚಲನಚಿತ್ರ ನಟ, ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಪ್ರದಾನ ಮಾಡಲಿದ್ದಾರೆ.
ಪತ್ರಕರ್ತರಿಗೆ ಪುರಸ್ಕಾರ: ಹಿರಿಯ ಪತ್ರಕರ್ತರಾದ ಜಿನ್ನಪ್ಪ ಗೌಡ, ಐ.ಬಿ.ಸಂದೀಪ್ ಕುಮಾರ್, ವಿನೋಬಾ ಕೆ.ಟಿ., ಪ್ರಕಾಶ್ ಇಳಂತಿಲ, ಪುಷ್ಪರಾಜ್ ಬಿ.ಎನ್., ಸ್ಟ್ಯಾನ್ಲಿ ಪಿಂಟೊ, ರಾಮಕೃಷ್ಣ ಭಟ್, ರಾಮಕೃಷ್ಣ ಆರ್., ಇಬ್ರಾಹಿಂ ಅಡ್ಕಸ್ಥಳ ಮತ್ತು ಬಿ.ರವೀಂದ್ರ ಶೆಟ್ಟಿಯವರಿಗೆ 2022ನೇ ಸಾಲಿನ ಗೌರವ ಪುರಸ್ಕಾರ ನಡೆಯಲಿದೆ.
ಪತ್ರಕರ್ತರ ಮಕ್ಕಳಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಎಚ್.ಜಿ. ಪ್ರತಿಭಾ ಪುರಸ್ಕಾರ ನೆರವೇರಿಸಲಿದ್ದಾರೆ. ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಪತ್ರಕರ್ತರ ಸಂಘಕ್ಕೆ ಇಸಿಜಿ ಯಂತ್ರ ಹಸ್ತಾಂತರ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಕೆ.ಆನಂದ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಸದಸ್ಯ ಪಿ.ಬಿ.ಹರೀಶ್ ರೈ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಇಬ್ರಾಹಿಂ ಅಡ್ಕಸ್ಥಳ ಅವರ ಉಪಸ್ಥಿತಿ ಇರಲಿದೆ ಎಂದು ಅವರು ಹೇಳಿದ್ದಾರೆ.