ಸುರತ್ಕಲ್ ಕ್ಷೇತ್ರದಿಂದ ನಾನೂ ಟಿಕೆಟ್ ಆಕಾಂಕ್ಷಿ, ಆದರೂ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಗೆಲ್ಲಿಸಲು ಸಿದ್ಧ: ಇನಾಯತ್ ಅಲಿ

Prasthutha|

ಮಂಗಳೂರು: ಮಂಗಳೂರು ಉತ್ತರ (ಸುರತ್ಕಲ್) ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ನಾನು ಕೂಡ ಒಬ್ಬ. ಆದರೆ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದೇವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ತಿಳಿಸಿದ್ದಾರೆ.

- Advertisement -


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008ರಲ್ಲಿಯೂ ಇದೇ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಅಂದು ಹಿರಿಯರ ಸಲಹೆಯ ಮೇರೆಗೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದೆ. ಈ ಬಾರಿ ಟಿಕೆಟ್’ಗಾಗಿ ಅರ್ಜಿ ಸಲ್ಲಿಸಿದ್ದೇನೆ. ಪಕ್ಷದ ಹೈಕಮಾಂಡ್ ಎಲ್ಲಾ ಮಾನದಂಡಗಳನ್ನು ಪರಿಗಣಿಸಿ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಲಿದೆ ಎಂದು ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವ ಗ್ಯಾರಂಟಿಗಳಿಗೆ ಜನರನ್ನು ನೋಂದಾಯಿಸಲು ಮಂಗಳೂರಿನಲ್ಲಿ ವಿನೂತನ ಮತ್ತು ವಿಶೇಷ ಅಭಿಯಾನವನ್ನು ಪ್ರಾರಂಭಿಸಿರುವುದಾಗಿ ಅವರು ತಿಳಿಸಿದರು.
ಸಾಮಾನ್ಯ ಜನರ ಬದುಕನ್ನು ಸುಗಮಗೊಳಿಸಲು ಮಂಗಳೂರಿನ ಪ್ರತಿ ಮನೆ ಬಾಗಿಲಿಗೆ ತೆರಳಿ ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿಗಳನ್ನು ಜನರಿಗೆ ತಲುಪಿಸುತ್ತೇವೆ. ನಮ್ಮ ತಂಡ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಗ್ಯಾರಂಟಿಗಳ ಬಗ್ಗೆ ಜನರಿಗೆ ತಿಳಿಸುವ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ. ಕ್ಷೇತ್ರದ ಭೇಟಿಯ ವೇಳೆ ಹೆಸರು, ವಯಸ್ಸು, ಮೊಬೈಲ್ ಸಂಖ್ಯೆ, ವಿಳಾಸದಂತಹ ಮೂಲ ಮಾಹಿತಿಯನ್ನು ಪಡೆದು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಗೆ ನೋಂದಾಯಿಸಿಕೊಳ್ಳುತ್ತೇವೆ ಎಂದು ಅಲಿ ತಿಳಿಸಿದರು.


ಹೆಸರು ನೋಂದಾಯಿಸಿದ ಜನರು ಆದ್ಯತೆಯ ಮೇಲೆ ಕಾಂಗ್ರೆಸ್ ಗ್ಯಾರೆಂಟಿಗಳ ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು IAM ಫೌಂಡೇಶನ್ ನೀಡಿದ ಆದ್ಯತೆಯ ಕಾರ್ಡ್’ನೊಂದಿಗೆ ನಾವು ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ ಕಾರ್ಡ್’ಗಳನ್ನು ಜನರಿಗೆ ಒದಗಿಸುತ್ತೇವೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು ನಾವೇ ಸರ್ಕಾರ ರಚಿಸುತ್ತೇವೆ, ಅದೇ ಸಮಯದಲ್ಲಿ ನಮ್ಮ ಜನರು ಹಿಂದುಳಿಯುವುದನ್ನು ನಾವು ಬಯಸುವುದಿಲ್ಲ, ಅದಕ್ಕಾಗಿಯೇ ನಾವು ಈ ವಿಶೇಷವಾದ ಮನೆ ಮನೆ ಅಭಿಯಾನವನ್ನು ಪ್ರಾರಂಭಿಸಿದ್ದೇವೆ ಎಂದು ಇನಾಯತ್ ಅಲಿ ತಿಳಿಸಿದರು.
ಕಾಂಗ್ರೆಸ್ ಪಕ್ಷ ಘೋಷಿಸಿರುವ ಗೃಹ ಜ್ಯೋತಿ ಗ್ಯಾರಂಟಿ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಅಲ್ಲದೆ ಕಾಂಗ್ರೆಸ್ ಪಕ್ಷದ ಗೃಹ ಲಕ್ಷ್ಮೀ ಗ್ಯಾರಂಟಿಯಡಿ ಪ್ರತಿ ಮಹಿಳಾ ಕುಟುಂಬದ ಯಜಮಾನಿಗೆ ಮಾಸಿಕ 2000 ರೂ.ನೀಡಲಾಗುತ್ತದೆ ಎಂದು ಹೇಳಿದ ಅವರು, ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ಹೈರಾಣಾಗಿದೆ. ಕಾಂಗ್ರೆಸ್ ಪಕ್ಷ ಸಮಾಜದ ಕಲ್ಯಾಣ ಮತ್ತು ಪ್ರಗತಿಪರ ಬೆಳವಣಿಗೆಯ ರಾಜಕೀಯವನ್ನು ನಂಬುತ್ತದೆ ಹಾಗೂ ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಗ್ಯಾರಂಟಿಗಳನ್ನು ಘೋಷಿಸಲಾಗಿದೆ ಎಂದು ಅವರು ಹೇಳಿದರು.



Join Whatsapp