ಚಂಡೀಗಢ : ಹರ್ಯಾಣದಲ್ಲಿ ಅಂತರ್ ಜಾತಿ ವಿವಾಹವಾದ ಯುವಕನೊಬ್ಬನನ್ನು, ಜಾತಿವಾದಿ ಉಗ್ರರು ಇರಿದು ಹತ್ಯೆ ಮಾಡಿದ ಮತ್ತೊಂದು ಘಟನೆ ನಡೆದಿದೆ. 23 ವರ್ಷದ ನೀರಜ್ ಎಂಬಾತ ಹತ್ಯೆಯಾದ ಯುವಕ. ನೀರಜ್ ಮದುವೆಯಾದ ಹುಡುಗಿಯ ಸಹೋದರರು ಈ ಕೃತ್ಯ ಎಸಗಿದ್ದಾರೆ.
ಪಾಣಿಪತ್ ನ ಜನನಿಭಿಡ ಮಾರುಕಟ್ಟೆಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಆರೋಪಿಗಳು ಯುವಕನಿಗೆ ಇರಿದು ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಆರೋಪಿಗಳು ನೀರಜ್ ನನ್ನು ಮಾತುಕತೆಗೆ ಬರುವಂತೆ ಘಟನೆಗೂ ಸ್ವಲ್ಪ ಮೊದಲು ಕರೆದಿದ್ದರು. ಈ ನಡುವೆ, ತಮ್ಮ ಸಹೋದರಿಗೆ ಕರೆ ಮಾಡಿ, ನೀನು ಸ್ವಲ್ಪ ಸಮಯದಲ್ಲೇ ಅಳುವುದಕ್ಕಿದೆ ಎಂದಿದ್ದರು.
ಅವರು ನನ್ನ ಸಹೋದರನಿಗೆ ಹಲವು ಬಾರಿ ಬೆದರಿಕೆಯೊಡ್ಡಿದ್ದರು, ನಾವು ಪೊಲೀಸರಲ್ಲಿ ರಕ್ಷಣೆ ಕೇಳಿದ್ದೆವು. ಅವರು ಅದನ್ನು ನಿರ್ಲಕ್ಷಿಸಿದ್ದರು. ಇನ್ನೂ ಹೆಚ್ಚು ಸಾವುಗಳಾಗಲಿವೆ ಎಂದು ಅವರು ಕರೆ ಮಾಡಿ ತಿಳಿಸಿದ್ದಾರೆ ಎಂದು ನೀರಜ್ ನ ಸಹೋದರ ಜಗದೀಶ್ ಹೇಳಿದ್ದಾರೆ.
ಒಂದೂವರೆ ತಿಂಗಳ ಹಿಂದೆಯಷ್ಟೇ ನೀರಜ್ ನ ವಿವಾಹವಾಗಿತ್ತು. ವಿವಾಹಕ್ಕೆ ಸಂಬಂಧಿಸಿ ಹಲವು ಸಲ ಗ್ರಾಮದಲ್ಲಿ ಪಂಚಾಯತ್ ಸಭೆ ನಡೆದಿತ್ತು ಮತ್ತು ವಿವಾಹಕ್ಕೆ ಎರಡೂ ಕಡೆಯವರು ಒಪ್ಪಿದ್ದರು. ಆದರೆ, ಹುಡುಗಿಯ ಅಣ್ಣ ಮಾತ್ರ ಬೆದರಿಕೆಯೊಡ್ಡುತ್ತಲೇ ಇದ್ದ ಎನ್ನಲಾಗಿದೆ.