ನವದೆಹಲಿ : ಉತ್ತರ ಪ್ರದೇಶದ ಬಾಗ್ಪತ್ ನಲ್ಲಿ 57ರ ಹರೆಯದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಇಂದು, ಮತ್ತೋರ್ವ ರೈತ ಉ.ಪ್ರ.-ಗಾಝಿಯಾಬಾದ್ ಗಡಿಯಲ್ಲಿ ಆತ್ಮಹತ್ಯೆಗ ಶರಣಾಗಿದ್ದಾರೆ. ಮೃತರನ್ನು ಉತ್ತರ ಪ್ರದೇಶದ ರಾಮ್ ಪುರ ಜಿಲ್ಲೆಯ ಬಿಲಾಸ್ ಪುರ ಪ್ರದೇಶದಲ್ಲಿ ಕಶ್ಮಿರ್ ಸಿಂಗ್ ಲಾಡಿ ಎಂದು ಗುರುತಿಸಲಾಗಿದೆ.
ಪ್ರತಿಭಟನಾ ಸ್ಥಳದಲ್ಲಿ ಅಳವಡಿಸಲಾಗಿದ್ದ ಮೊಬೈಲ್ ಶೌಚಾಲಯದಲ್ಲಿ ರೈತ ಲಾಡಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.
ಮೃತರು ಡೆತ್ ನೋಟ್ ಬಿಟ್ಟು ಹೋಗಿದ್ದು, ರೈತರ ಬೇಡಿಕೆಗಳನ್ನು ಪ್ರಧಾನಿ ಮೋದಿ ಸರಕಾರ ಈಡೇರಿಸದಿರುವುದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಲಾಡಿ ಅವರ ಮೊಮ್ಮಗ ಕೂಡ ದೆಹಲಿ-ಗಾಝಿಯಾಬಾದ್ ಗಡಿಯಲ್ಲಿ ಪ್ರತಿಭಟನೆ ನಿರತರಾಗಿದ್ದಾರೆ.
ಕಳೆದ 38 ದಿನಗಳಿಂದ ರೈತರು ಕೊರೆವ ಚಳಿಯನ್ನೂ ಲೆಕ್ಕಿಸದೆ ದೆಹಲಿ ಗಡಿ ಭಾಗಗಳಲ್ಲಿ ಪ್ರಧಾನಿ ಮೋದಿ ಸರಕಾರದ ನೂತನ ಕೃಷಿ ನೀತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಲವು ರೈತರು ಮೃತಪಟ್ಟಿದ್ದಾರೆ. ನಿನ್ನೆ ಓರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದರು.