ಬೆಂಗಳೂರು: ಮಹಿಳೆಯರನ್ನು ಬಾಡಿಗೆ ಇಲ್ಲವೇ ಕಳ್ಳಸಾಗಣೆ ಮೂಲಕ ಕರೆತಂದು ಮಕ್ಕಳಿಗೆ ನಿದ್ದೆ ಬರುವ ಔಷಧಿ ನೀಡಿ ಮಲಗಿಸಿ ಭಿಕ್ಷಾಟನೆ ಮಾಡಿಸುತ್ತಿದ್ದ ಜಾಲವನ್ನು ಭೇದಿಸಿರುವ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು, 55 ಮಂದಿಯನ್ನು ರಕ್ಷಿಸಿದ್ದಾರೆ.
ನಗರದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು ಭಿಕ್ಷಾಟನೆ ಮಾಡುತ್ತಿದ್ದ ಜಾಲವನ್ನು ಬಂಧಿಸಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಎಸ್. ಡಿ.ಶರಣಪ್ಪ ತಿಳಿಸಿದ್ದಾರೆ.
ನಗರದ ಕೇಂದ್ರ, ಉತ್ತರ,ದಕ್ಷಿಣ, ಪೂರ್ವ, ಪಶ್ಚಿಮ, ಈಶಾನ್ಯ, ಆಗ್ನೇಯ, ವೈಟ್ ಫೀಲ್ಡ್ ವಿಭಾಗದಲ್ಲಿ 14 ತಂಡಗಳ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ. 3 ಹುಡುಗರು, 5 ಹುಡುಗಿಯರು, ತಾಯಿ ಮತ್ತು ಮಕ್ಕಳು, 18 ಹೆಂಗಸರು, 5 ಗಂಡಸರು 7 ಸೇರಿ 55 ಮಂದಿ ಭಿಕ್ಷುಕರನ್ನು ರಕ್ಷಿಸಲಾಗಿದೆ. ರಕ್ಷಣೆ ಮಾಡಲ್ಪಟ್ಟ ಎಲ್ಲರನ್ನೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಪುನರ್ವಸತಿ ಕಲ್ಪಿಸಲಾಗಿದೆ.
ಭಿಕ್ಷಾಟನೆಯನ್ನು ಮಾಡುತ್ತಿದ್ದ ಕೆಲ ಮಹಿಳೆಯರು, ತಮ್ಮ ಭಿಕ್ಷಾಟನೆ ಕಾರ್ಯಕ್ಕಾಗಿ ಕಳ್ಳತನ ಮಾಡಿಕೊಂಡು ಬಂದಿದ್ದಾರೆ. ಬಹುತೇಕ ಮಕ್ಕಳು ಕಳ್ಳ ಸಾಗಾಣಿಕ ಮಾಡಿ ತಂದಿರುವ ಮಕ್ಕಳಾಗಿದ್ದಾರೆ ಎಂದು ತಿಳಿದುಬಂದಿದೆ.
ಭಿಕ್ಷಾಟನೆ ಮಾಡುವಾಗ ಚಿಕ್ಕ ಕಂದಮ್ಮಗಳಿಗೆ ನಿದ್ದೆ ಔಷಧಿಯನ್ನು ಬಲವಂತವಾಗಿ ನೀಡಲಾಗುತ್ತಿತ್ತು. ಮಕ್ಕಳು ಎಚ್ಚರವಿಲ್ಲದೇ ಜೋಳಿಗೆಯಲ್ಲಿ ಮಲಗಿದ ನಂತರ ಟ್ರಾಫಿಕ್ ಸಿಗ್ನಲ್’ಗಳು ಹಾಗೂ ಇತರೆ ಜನಸಂದಣಿ ಪ್ರದೇಶದಲ್ಲಿ ಮಕ್ಕಳನ್ನು ಮಲಗಿಸಿ ಭಿಕ್ಷೆ ಬೇಡುತ್ತಿದ್ದರು.
ಕೂಲಿ ಕಾರ್ಮಿಕರು ಹಾಗೂ ಹೊರ ರಾಜ್ಯದಿಂದ ಬಂದು ಅಲ್ಪಸ್ವಲ್ಪ ಕನ್ನಡವನ್ನು ಕಲಿತ ಮಹಿಳೆಯರನ್ನು ಕೂಲಿ ಆಧಾರದಲ್ಲಿ, ಬಾಡಿಗೆ ಆಧಾರದಲ್ಲಿ ಪಡೆದುಕೊಂಡು ಅವರಿಗೆ ಮತ್ತು ಬರುವ ಔಷಧಿಯನ್ನು ನೀಡಿದ ಮಕ್ಕಳನ್ನು ಕೊಟ್ಟು ಭಿಕ್ಷಾಟನೆಗೆ ಕಳಿಸಲಾಗುತ್ತಿತ್ತು ಎಂಬ ಅನುಮಾನ ಬಂದಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ಆದರೆ, ಮಕ್ಕಳು ಮತ್ತು ಅವರನ್ನು ಎತ್ತಿಕೊಂಡು ಭಿಕ್ಷಾಟನೆ ಮಾಡುತ್ತಿದ್ದ ತಾಯಂದಿರಿಗೂ ಹೋಲಿಕೆ ಇಲ್ಲದಿರುವುದು ಕಂಡುಬಂದಿದೆ. ಭಿಕ್ಷಾಟನೆಯಿಂದ ರಕ್ಷಣೆ ಮಾಡಿದವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಾಂತ್ವಾನ ಕೇಂದ್ರಕ್ಕೆ ಬಿಡಲಾಗಿದೆ.
ಈಗಾಗಲೇ ನಗರದಲ್ಲಿ ನಮ್ಮ ಬೆಂಗಳೂರು ಫೌಂಡೇಶನ್, ವಿನೋದ್ ಕರ್ತವ್ಯ ಅವರ ನೇತೃತ್ವದ ಬೆಂಗಳೂರು ಹುಡುಗರು ತಂಡ ಸೇರಿ ಹಲವು ಸಂಘಟನೆಗಳು ಹಾಗೂ ಸಾರ್ವಜನಿಕರು ಭಿಕ್ಷಾಟನೆಯ ವಿರುದ್ಧ ಜಾಗೃತಿ ಮೂಡಿಸಿದ್ದರು.
ಈ ವೇಳೆ ಮಕ್ಕಳ ಕಳ್ಳಸಾಗಾಣಿಕೆ, ಮತ್ತು ಬರುವ ಔಷಧ ನೀಡುವುದು, ಮಕ್ಕಳ ಕೈ- ಕಾಲುಗಳಿಗೆ ಗಾಯ ಮಾಡಿ ಅಳಿಸುವ ಭಿಕ್ಷಾಟನೆ ಪ್ರಕರಣಗಳನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದರು.