ಇಂದೋರ್ : ಕೋಮುವಾದಿ ಮನೋಸ್ಥಿತಿಯ ಕಾರ್ಯಾಚರಣೆಗಳಿಗೆ ಉತ್ತರ ಪ್ರದೇಶ ಪೊಲೀಸರೊಂದಿಗೆ ಮಧ್ಯಪ್ರದೇಶ ಪೊಲೀಸರು ಸ್ಪರ್ಧೆಗೆ ಬಿದ್ದಂತಿದೆ. ಬಿಜೆಪಿ ನಾಯಕ, ಕೇಂದ್ರ ಸಚಿವ ಅಮಿತ್ ಶಾ ಕುರಿತು ಹಾಸ್ಯ ಮಾಡಿದ ಆರೋಪದಲ್ಲಿ ಐವರು ಸ್ಟಾಂಡ್ ಅಪ್ ಕಾಮಿಡಿಯನ್ ಗಳನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಹಾಸ್ಯಗಾರರು ಹಿಂದೂ ದೇವ-ದೇವತೆಯರನ್ನೂ ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇಂದೋಡ್ ನ ಕೆಫೆಯೊಂದರಲ್ಲಿ ಹೊಸ ವರ್ಷಾಚರಣೆ ಸಂಬಂಧದ ಕಾರ್ಯಕ್ರಮವೊಂದರಲ್ಲಿ ಸ್ಟಾಂಡ್ ಅಪ್ ಕಾಮಿಡಿಯನ್ ಗಳಾದ ಪ್ರಖರ್ ವ್ಯಾಸ್, ಪ್ರಿಯಂ ವ್ಯಾಸ್, ನಳಿನ್ ಯಾದವ್, ಎಡ್ವಿನ್ ಆಂಟನಿ ಮತ್ತು ಮುನಾವರ್ ಫಾರೂಕಿ ಮುಂತಾದವರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ. ಕಾರ್ಯಕ್ರಮದ ವೇಳೆ ಹಿಂದೂ ರಕ್ಷಕ್ ಸಂಸ್ಥಾ ಎಂಬ ಸಂಘಟನೆಯವರೆನ್ನಲಾದ ಕೆಲವರು ದಾಂಧಲೆ ನಡೆಸಿದ್ದರು.
ಕಾಮಿಡಿಯನ್ ಗಳ ಗುಂಪು ಹಿಂದೂ ದೇವ-ದೇವತೆಯರು, ಸಂಪ್ರದಾಯಗಳು ಮತ್ತು ಶಾ ಅವರ ಕುರಿತು ಹಾಸ್ಯಗಳನ್ನು ಮಾಡಿದ್ದಾರೆ ಎಂದು ಗುಂಪೊಂದು ಆಪಾದಿಸಿದೆ. ಅವರನ್ನು ಪೊಲೀಸ್ ಠಾಣೆಗೆ ಕರೆ ತರಲಾಗಿದೆ. ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹಾಸ್ಯಗಾರರ ಮೇಲೆ ಗುಂಪು ಹಲ್ಲೆ ನಡೆಸಿರುವ ವೀಡಿಯೊವೊಂದು ವೈರಲ್ ಆಗಿದೆ. ಆದರೆ, ಹಲ್ಲೆ ನಡೆಸಿರುವ ಬಗ್ಗೆ ತಮಗೆ ಗೊತ್ತಿಲ್ಲ ಎಂದು ಪೊಲೀಸ್ ಠಾಣಾಧಿಕಾರಿ ಕಮಲೇಶ್ ಶರ್ಮಾ ಹೇಳಿದ್ದಾರೆ.