ಬೆಂಗಳೂರು: ವಿಜಯಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ (ಕೆಎಸ್ ಆರ್ ಟಿಸಿ) ನಾನ್ ಎಸಿ ಸ್ಲೀಪರ್ ಬಸ್’ನಲ್ಲಿ ಪ್ರಯಾಣಿಕನೊಬ್ಬ ಯುವತಿ ಮೇಲೆ ಮೂತ್ರ ವಿಸರ್ಜನೆ ಮೇಲೆ ಮಾಡಿದ್ದಾನೆ ಎನ್ನುವುದು ಸತ್ಯಕ್ಕೆ ದೂರವಾದುದು ಎಂದು ಕೆಎಸ್’ಆರ್’ಟಿಸಿ ಸ್ಪಷ್ಟಪಡಿಸಿದೆ.
ಈ ಸಂಬಂಧ ಕೆಎಸ್’ಆರ್’ಟಿಸಿಯ ಮಂಗಳೂರು ವಿಭಾಗದ ಹಿರಿಯ ವಿಭಾಗಿಯ ನಿಯಂತ್ರಣಾಧಿಕಾರಿ ನೀಡಿರುವ ಪ್ರಕಟಣೆಯಲ್ಲಿ ಪಾನಮತ್ತನಾಗಿದ್ದ ಪ್ರಯಾಣಿಕ ಯುವತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿಲ್ಲ, ಖಾಲಿ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆತನನ್ನು ಬೈದು ಅಲ್ಲಿಯೇ ಇಳಿಸಿ ಪ್ರಯಾಣ ಮುಂದುವರೆಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಮೂತ್ರ ಮಾಡಿರುವ ವಿಚಾರಕ್ಕೆ ಸಂಬಂಧ ದೂರು ಬಂದ ಕೂಡಲೇ ಕಾರ್ಯಪ್ರವೃತ್ತರಾಗಿದ್ದೇವೆ. ವಾಹನ ಸಂಖ್ಯೆ ಕೆಎ 19 ಎಫ್ 3554 ರಲ್ಲಿ ಕರ್ತವ್ಯ ನಿರ್ವಹಿಸಿದ ಚಾಲಕ ಸಂತೋಷ್ ಮಠಪತಿ ಬಿಲ್ಲೆ ಹಾಗೂ ನಿರ್ವಾಹಕರಾದ ಉಮೇಶ್ ಕರಡಿ ಹೇಳಿಕೆ ಪಡೆಯಲಾಗಿದೆ. ಆರೋಪಿಯು ಮುಂಗಡ ಆಸನ ಕಾಯ್ದಿರಿಸದ ಪ್ರಯಾಣಿಕರಾಗಿದ್ದು ಆಸನ ಸಂಖ್ಯೆ 29 ರಲ್ಲಿ ಕುಳಿತಿದ್ದರೆ, ಯುವತಿಯು ಆಸನ ಸಂಖ್ಯೆ 3 ರಲ್ಲಿದ್ದರು. ಬಸ್ಸನ್ನು ಚಾಲಕ ಹುಬ್ಬಳ್ಳಿಯ ಕಿರೇಸೂರು ಹೋಟೇಲ್ ಬಳಿ ರಾತ್ರಿ 10:30ಕ್ಕೆ ಊಟ, ತಿಂಡಿಗಾಗಿ ನಿಲ್ಲಿಸಿದ್ದರು. ಪ್ರಯಾಣಿಕರೆಲ್ಲ ಬಸ್’ನಿಂದ ಇಳಿದು ಊಟಕ್ಕೆ ಹೋಗಿದ್ದರು. ಆಸನ ಸಂಖ್ಯೆ 29ರಲ್ಲಿದ್ದ ಪಾನಮತ್ತ ಪ್ರಯಾಣಿಕ ಚಾಲಕನ ಹಿಂದಿನ ಸೀಟಿನ (ಆಸನ ಸಂಖ್ಯೆ 3) ಬಳಿ ಬಂದು ಅದರ ಮೇಲೆ ಮೂತ್ರ ವಿಸರ್ಜಿಸಿದ್ದಾನೆ.
ಆ ಸಮಯದಲ್ಲಿ ಊಟ ಮುಗಿಸಿ ಮಹಿಳಾ ಪ್ರಯಾಣಿಕರು (ಅವರು ಆಸನ ಸಂಖ್ಯೆ 3ರಲ್ಲಿದ್ದವರು) ಬಸ್ ಏರಲು ಮುಂದಾದಾಗ, ಘಟನೆಯನ್ನು ಕಂಡು ತಕ್ಷಣವೇ ಚಾಲಕರ ಗಮನಕ್ಕೆ ತಂದಿದ್ದಾರೆ. ಕೂಡಲೇ ಚಾಲಕರು, ನಿರ್ವಾಹಕರು ಮತ್ತು ಇತರೆ ಪ್ರಯಾಣಿಕರು ಪ್ರಯಾಣಿಕನನ್ನು ಬಸ್ಸಿನಿಂದ ಕೆಳಗಿಳಿಸಿ ಬೈದು ತರಾಟೆಗೆ ತೆಗೆದುಕೊಂಡಿದ್ದು,ನಂತರ ಆಸನವನ್ನು ಶುಚಿಗೊಳಿಸಿದ ಬಸ್ ಸಿಬ್ಬಂದಿ ಪ್ರಯಾಣಿಕನನ್ನು ಅಲ್ಲಿಯೇ ಇಳಿಸಿ ಪ್ರಯಾಣ ಮುಂದುವರಿಸಿದ್ದಾರೆ.
ಯುವತಿಯು ಆಸನ ಸಂಖ್ಯೆ 9ರಲ್ಲಿ ಕುಳಿತು ಪ್ರಯಾಣ ಮುಂದುವರಿಸಿ ಇತರ ಆರು ಮಂದಿ ಪ್ರಯಾಣಿಕರ ಜೊತೆ ಹುಬ್ಬಳ್ಳಿಯಲ್ಲಿ ಇಳಿದಿದ್ದಾರೆ. ಅನಾಗರಿಕವಾಗಿ ಬಸ್ಸಿನಲ್ಲಿ ಮೂತ್ರ ವಿಸರ್ಜನೆ ಮಾಡಿದ ಸಹ ಪ್ರಯಾಣಿಕನ ಕುರಿತು ಮಾಹಿತಿಯನ್ನು ತಿಳಿಯಲು ಪ್ರಯತ್ನಿಸಲಾಗಿದೆ. ಆತ, ಕ್ಷಮೆಯಾಚಿಸಿದ್ದು, ಹೆಚ್ಚಿನ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.