ನವದೆಹಲಿ: ಕೇಂದ್ರದ ಬಿಜೆಪಿ ಸರಕಾರವು ವಕ್ಫ್ ಮಂಡಳಿಗೆ ಸೇರಿದ 123 ಆಸ್ತಿಗಳನ್ನು ವಶಪಡಿಸಿಕೊಳ್ಳಲು ಹೊರಟಿದ್ದು ಅದನ್ನು ನಾವು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿರುವುದಾಗಿ ದಿಲ್ಲಿ ವಕ್ಫ್ ಮಂಡಳಿಯ ಅಧ್ಯಕ್ಷ ಅಮಾನತುಲ್ಲಾ ಖಾನ್ ಹೇಳಿದ್ದಾರೆ.
ಈ 123 ಆಸ್ತಿಗಳು ಕಾಲಾನುಕಾಲದಿಂದ ವಕ್ಫ್ ಮಂಡಳಿಯದಾಗಿಯೇ ಇದೆ. ಈಗ ಕೇಂದ್ರ ಸರಕಾರವು ನಿಯಮ ಮೀರಿ, ಕಾನೂನು ಮೀರಿ ಬಲವಂತದಿಂದ ವಶಪಡಿಸಿಕೊಳ್ಳಲು ನೋಡುತ್ತಿದೆ ಎಂದು ಅವರು ಆಪಾದಿಸಿದರು.
ಕೇಂದ್ರ ಸರಕಾರದ ವಸತಿ ಮತ್ತು ನಗರ ಸಂಬಂಧಿ ಸಚಿವಾಲಯದ ಎಲ್ ಆ್ಯಂಡ್ ಡಿಓ- ಭೂಮಿ ಮತ್ತು ಅಭಿವೃದ್ಧಿ ಕಚೇರಿಯು ಇತ್ತೀಚೆಗೆ ವಕ್ಫ್ ಮಂಡಳಿಯ ಈ 123 ಆಸ್ತಿಗಳನ್ನು ವಶಪಡಿಸಿಕೊಳ್ಳುವ ತೀರ್ಮಾನ ತೆಗೆದುಕೊಂಡಿದೆ. ಅದರಲ್ಲಿ ಮಸೀದಿಗಳು, ದರ್ಗಾಗಳು, ಖಬರಸ್ತಾನಗಳೂ ಸೇರಿವೆ ಎಂದು ಅಮಾನತುಲ್ಲಾ ಖಾನ್ ತಿಳಿಸಿದರು.