ಹೈದರಾಬಾದ್: ಕೊಟ್ಟ ಪೀಠೋಪಕರಣ ಹಳೆಯದಿರುವುದನ್ನು ಕಂಡು ಮದುವೆ ನಿಲ್ಲಿಸಿದ ಘಟನೆಯ ಸೋಮವಾರ ಹೈದರಾಬಾದಿನಲ್ಲಿ ವರದಿಯಾಗಿದೆ.
ಬಸ್ ಚಾಲಕನಾಗಿ ಕೆಲಸ ಮಾಡುತ್ತಿರುವ ಮದುವೆ ಗಂಡು ಭಾನುವಾರ ಮದುವೆ ಆಗಬೇಕಿದ್ದ ಸ್ಥಳಕ್ಕೆ ಬರಲೇ ಇಲ್ಲ. ಈ ಸಂಬಂಧ ಹೆಣ್ಣಿನ ತಂದೆ ಪೊಲೀಸರಿಗೆ ದೂರು ನೀಡಿದ್ದು, ಮೊಕದ್ದಮೆ ದಾಖಲಾಗಿದೆ.
ನಾನು ಅವರ ಮನೆಗೆ ವಿಚಾರಿಸಲು ಹೋದಾಗ ಗಂಡಿನ ತಂದೆ ನನ್ನ ಜೊತೆಗೆ ಕೆಟ್ಟದಾಗಿ ನಡೆದುಕೊಂಡರು ಎಂದು ಹೆಣ್ಣಿನ ತಂದೆ ಮಾಧ್ಯಮದವರಲ್ಲಿ ಶೋಕ ತೋಡಿಕೊಂಡರು.
“ಕೇಳಿದ ಎಲ್ಲ ವಸ್ತುಗಳನ್ನು ಕೊಟ್ಟಿಲ್ಲ ಮತ್ತು ನೀಡಿರುವ ಪೀಠೋಪಕರಣ ಹಳೆಯದು. ಅದಕ್ಕಾಗಿ ಅವರು ಬರಲು ನಿರಾಕರಿಸಿದರು. ನಾನು ಮದುವೆಯ ಔತಣ ಏರ್ಪಡಿಸಿದ್ದೆ ಮತ್ತು ಬಂಧು ಮಿತ್ರರನ್ನೆಲ್ಲ ಆಮಂತ್ರಿಸಿದ್ದೆ. ಆದರೆ ಮದುಮಗನೇ ಬರಲಿಲ್ಲ” ಎಂದು ಹೆಣ್ಣಿನ ತಂದೆ ಬೇಸರ ವ್ಯಕ್ತಪಡಿಸಿದರು.
ಗಂಡಿನ ಮನೆಯವರು ಹತ್ತಾರು ಸಾಮಾನುಗಳನ್ನು ವರದಕ್ಷಿಣೆಯಾಗಿ ಕೇಳಿದ್ದರು. ಅದರಲ್ಲಿ ಕೊಟ್ಟ ಪೀಠೋಪಕರಣ ಹಳೆಯದು ಎನ್ನುವುದು ಅವರ ದೂರು. ಗಂಡಿನ ಮನೆಯವರು ಅವನ್ನೆಲ್ಲ ಒಪ್ಪದೆ ಮದುವೆ ದಿನ ಬಂದಿಲ್ಲ ಎಂಬುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಕ್ಷಿಣೆ ನಿಷೇಧ ಕಾನೂನಿನಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದೂ ಪೊಲೀಸರು ತಿಳಿಸಿದರು.