ಬೆಳ್ತಂಗಡಿ : ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿಗಳ ವಿಜಯೋತ್ಸವದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ ಎಂಬ ಸುಳ್ಳು ಆರೋಪದಲ್ಲಿ ಅಮಾಯಕರನ್ನು ಬಂಧಿಸಿರುವುದನ್ನು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಮೊದಲು ಸುಳ್ಳು ಸುದ್ದಿ ಪ್ರಸಾರ ಮಾಡಿರುವುದು ‘ದಿಗ್ವಿಜಯ’ ಕನ್ನಡ ಚಾನೆಲ್. ಈ ವಿಷಯಕ್ಕೆ ಸಂಬಂಧಿಸಿ ಚಾನೆಲ್ ನವರು ತೋರಿಸಿದ ಯಾವುದೇ ವಿಡಿಯೋ ಕ್ಲಿಪ್ ನಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬುದು ಇಲ್ಲ. ಇದು ಉದ್ದೇಶ ಪೂರ್ವಕವಾಗಿ ಎಸ್ ಡಿ ಪಿ ಐ ಪಕ್ಷದ ತೇಜೋವಧೆ ಮಾಡಲು ‘ದಿಗ್ವಿಜಯ’ ಕನ್ನಡ ಚಾನೆಲ್ ನವರ ಸಹಕಾರದಿಂದ ಮಾಡಿದ ಪೂರ್ವನಿಯೋಜಿತ ಕೃತ್ಯ ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ತಿಳಿಸಿದೆ.
ಇಷ್ಟೊಂದು ಗಂಭೀರ ವಿಷಯದಲ್ಲಿ ಪ್ರಾಥಮಿಕ ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಲು ತಯಾರಾಗದೆ, ಬಿಜೆಪಿ ಶಾಸಕರ ಒತ್ತಡಕ್ಕೆ ಮಣಿದು ಬೆಳ್ತಂಗಡಿ ಪೋಲಿಸ್ ಅಧಿಕಾರಿಗಳು ಕೆಲವು ಮನೆಗಳಿಗೆ ನುಗ್ಗಿ ಅಮಾಯಕ ಯುವಕರನ್ನು ಅಕ್ರಮ ಬಂಧನದಲ್ಲಿಟ್ಟು ರಾಷ್ಟ್ರದ್ರೋಹದ ಕೇಸು ಹಾಕಿ ಹಿಂಸೆ ಕೊಟ್ಟಿರುವುದು ಖಂಡನೀಯ. ಇದನ್ನು ಇಮಾಮ್ಸ್ ಕೌನ್ಸಿಲ್ ಬಲವಾಗಿ ಖಂಡಿಸುತ್ತದೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.
ಅಮಾಯಕ ಯುವಕರನ್ನು ಆದಷ್ಟು ಬೇಗನೆ ಬಿಡುಗಡೆ ಮಾಡಬೇಕು ಮತ್ತು ಈ ಸುಳ್ಳು ಸುದ್ದಿಗಳನ್ನು ಹರಡಿ ಗಲಭೆ ಸೃಷ್ಟಿಸಲು ಪ್ರಯತ್ನ ಮಾಡಿರುವುದರ ಹಿಂದಿರುವ ಎಲ್ಲಾ ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ಗೆ ಒಳಪಡಿಸಬೇಕು ಎಂಬುದಾಗಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದ.ಕ. ಜಿಲ್ಲಾ ಸಮಿತಿ ಆಗ್ರಹಿಸುತ್ತದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಯೂಸುಫ್ ಮಿಸ್ಸಾಹಿ ಅವರ ಹೇಳಿಕೆಯಲ್ಲಿ ತಿಳಿಸಲಾಗಿದೆ.