ಕಾಡಾನೆ ಸೆರೆ ಹಿಡಿಯಲು ದುಬಾರೆ ಸಾಕಾನೆ ಶಿಬಿರದಿಂದ‌ ಕಡಬಕ್ಕೆ ಬಂದ 5 ಆನೆಗಳು; ‘ಆಪರೇಷನ್ ಎಲಿಫೆಂಟ್’ ಕಾರ್ಯಾಚರಣೆ ಆರಂಭ

Prasthutha|

ಕಡಬ: ಕಡಬದ ಮೀನಾಡಿ ಬಳಿ ಇಬ್ಬರನ್ನು ಬಲಿ ತೆಗೆದುಕೊಂಡ ಕಾಡಾನೆಯನ್ನು ಸೆರೆ ಹಿಡಿಯಲು ಕಡಬ ಭಾಗದಲ್ಲಿ ‘ಆಪರೇಷನ್ ಎಲಿಫೆಂಟ್’ ಕಾರ್ಯಾಚರಣೆ ಆರಂಭಗೊಂಡಿದೆ.

- Advertisement -

ಎಲ್ಲಾ ಸಿದ್ಧತೆಗಳೊಂದಿಗೆ ಮಂಗಳವಾರ ಬೆಳಿಗ್ಗಿನಿಂದಲೇ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಕಾಡಾನೆಯನ್ನು ಹಿಡಿಯಲು ನಾಗರಹೊಳೆ ಮತ್ತು ದುಬಾರೆ ಸಾಕಾನೆ ಶಿಬಿರದಿಂದ‌ 5 ಆನೆಗಳು ಆಗಮಿಸಿದೆ.

ಕಾಡಾನೆ ಹಿಡಿಯುವುದರಲ್ಲಿ ಪಳಗಿರುವ ಅಭಿಮನ್ಯು, ಪ್ರಶಾಂತ್, ಹರ್ಷ, ಕಂಜನ್ ಹಾಗು ಮಹೇಂದ್ರ ಎಂಬ ಸಾಕಾನೆಗಳು ಕಾರ್ಯಾಚರಣೆಗೆ ಬಂದಿವೆ. ಲಾರಿಗಳ ಮೂಲಕ ಆನೆಗಳು ಸೋಮವಾರ ರಾತ್ರಿ ಕಡಬಕ್ಕೆ ಆಗಮಿಸಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳ ತಂಡ ಅಲ್ಲಲ್ಲಿ ವೀಕ್ಷಣೆ ನಡೆಸಿ ಹಾಗೂ ಡ್ರೋನ್ ಬಳಸಿ ಕಾಡಾನೆಯ ಚಲನ ವಲನಗಳನ್ನು ಪತ್ತೆ ಹಚ್ಚಿ ಸಾಕಾನೆಗಳ ಸಹಕಾರದಲ್ಲಿ ಸೆರೆ ಕಾಡಾನೆಯನ್ನು ಹಿಡಿಯಲು ಶ್ರಮಿಸಲಾಗುತ್ತಿದೆ.

- Advertisement -

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್, ಎಸಿಎಫ್ ಪ್ರವೀಣ್ ಕುಮಾರ್,  ಕಿಶೋರ್ ಕುಮಾರ್ ,ವಲಯ ಅರಣ್ಯಾಧಿಕಾರಿಗಳಾದ ಎನ್.ಮಂಜುನಾಥ್, ಆರ್.ಗಿರೀಶ್, ರಾಘವೇಂದ್ರ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಹಾಗು ಸಿಬ್ಬಂದಿಗಳ ತಂಡ ಕಾರ್ಯಾಚರಣೆ ಆರಂಭಿಸಿದ್ದಾರೆ. ನಾಗರಹೊಳೆ ಹಾಗು ಮಂಗಳೂರಿನಿಂದ ತಜ್ಞ ವೈದ್ಯಾಧಿಕಾರಿಗಳ ತಂಡವೂ ಆಗಮಿಸಿದೆ.

ಮೀನಾಡಿಯಲ್ಲಿ ನಿನ್ನೆ ಬೆಳಗ್ಗೆ ಕಾಡಾನೆ ದಾಳಿ ನಡೆಸಿದ ಪರಿಣಾಮ ರಮೇಶ್ ಹಾಗೂ ರಂಜಿತಾ ಎಂಬವರು ಮೃತಪಟ್ಟಿದ್ದರು. ವಿಷಯ ತಿಳಿದು ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಾಡಾನೆ ಸೆರೆಹಿಡಿಯಲು ಒತ್ತಾಯಿಸಿದ್ದರು. ಸಂತ್ರಸ್ತ ಕುಟುಂಬ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡಿತ್ತು.



Join Whatsapp