ಬೆಂಗಳೂರು; ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿದ ಬೆನ್ನಲ್ಲೇ ಜೈನ ಸಮುದಾಯದ ರಾಷ್ಟ್ರೀಯ ಅಣುವ್ರತ ಸಮಿತಿಯು ತನ್ನ 75 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಈ ವರ್ಷವನ್ನು “ಅಮೃತ ಮಹೋತ್ಸವ” ವರ್ಷವನ್ನಾಗಿ ವರ್ಷಪೂರ್ತಿ ಆಚರಿಸಲಾಗುತ್ತಿದೆ. ನೈತಿಕತೆ, ಸದ್ಭಾವನೆ ಮತ್ತು ನಶಾಮುಕ್ತಿ ಅಭಿಯಾನವನ್ನು ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಅಣುವೃತ ಸಮಿತಿ ಅಧ್ಯಕ್ಷ ಶಾಂತಿಲಾಲ್ ಪೌರ್ವಾಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ವರ್ಷ ಸಮಾಜದ ಎಲ್ಲಾ ವರ್ಗದ ಯುವ ಸಮೂಹ, ವಿದ್ಯಾರ್ಥಿಗಳ ಉನ್ನತಿಗಾಗಿ, ಉತ್ತಮ ನಾಗರೀಕರನ್ನಾಗಿ ರೂಪಿಸಲು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಜನಜಾಗೃತಿ ಜಾಥ, ಚರ್ಚಾಸ್ಪರ್ಧೆ, ಉಪನ್ಯಾಸ, ವಿಚಾರ ಸಂಕಿರಣ, ಚಿತ್ರಕಲೆ, ಸಾಂಸ್ಕತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಲಾಗುವುದು ಎಂದರು.
ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವ್ಯಾಪ್ತಿಯ ಎಲ್ಲಾ ಅಣುವ್ರತ ಸಮಿತಿಗಳಿಂದ ಫೆ. 21 ರಂದು ಅಮೃತ ಮಹೋತ್ಸವದ ಲಾಂಛನ ಬಿಡುಗಡೆ ಮಾಡಲಾಗುವುದು. ಬೆಂಗಳೂರಿನಲ್ಲಿ ಮಂಗಳವಾರ ಚಂದ್ರಾ ಲೇಔಟ್’ನ ಶ್ರೀ ಸಿದ್ಧಗಂಗಾ ವಿದ್ಯಾಪೀಠ ಟ್ರಸ್ಟ್’ನಲ್ಲಿ 75ನೇ ವಷಾಚರಣೆಯ ಲಾಂಚನ ಬಿಡುಗಡೆ ಮಾಡಲಾಗುವುದು. ಅಣುವ್ರತ ಸಮಿತಿಯನ್ನು ‘ಅಣು ವಿಭ’ ಸಂಸ್ಥೆ ಎಂದು ನಾಮಕಾರಣ ಮಾಡಿ ರಚನಾತ್ಮಕ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸ್ವಾತಂತ್ರ್ಯದ ನಂತರ ಭಾರತೀಯರಿಗಾಗಿ ರಾಷ್ಟ್ರೀಯ ಅಣುವ್ರತ ಸಮಿತಿ ರೂವಾರಿಗಳಾಗಿದ್ದ ರಾಷ್ಟ್ರ ಸಂತ, ಜೈನ ಸಮಾಜದ ಮಹಾಗುರು ಜೈನಾಚಾರ್ಯ ತುಳಸಿ ಅವರು ನೈತಿಕ ಶಿಕ್ಷಣಕ್ಕಾಗಿ “ಅಣುವೃತ” ಜನಾಂದೋಲನ ಎಂಬ ಕಾರ್ಯಕ್ರಮವನ್ನು ರೂಪಿಸಿದ್ದರು. ಇಂದಿನ ಜೈನಾಚಾರ್ಯರಾದ ಆಚಾರ್ಯ ಮಹಾಶ್ರಮಣಜೀ ಅವರ ಮಾರ್ಗದರ್ಶನದಲ್ಲಿ “ಅಮೃತ ಮಹೋತ್ಸವ” ಆಚರಣೆ ನಡೆಯುತ್ತಿವೆ. ಪ್ರಥಮ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅಣುವೃತ ಜನಾಂದೋಲನಕ್ಕೆ ಚಾಲನೆ ನೀಡಿದ್ದರು.
ಸುದ್ದಿಗೋಷ್ಠಿಯಲ್ಲಿ ಅಣುವೃತ ಸಮಿತಿ ಬೆಂಗಳೂರು ಕಾರ್ಯದರ್ಶಿ ಮಾಣಿಕ್ ಚಂದ್ ಸಂಚೇತಿ, ಸಂಘಟನಾ ಕಾರ್ಯದರ್ಶಿ ನಿರ್ಮಲಾ ಪೊಕ್ರಾನ್, ಶಾಂತಿ ಸಕಲೇಚ, ಸಂಯೋಜಕ ಬಿ.ವಿ.ಚಂದ್ರಶೇಖರಯ್ಯ ಉಪಸ್ಥಿತರಿದ್ದರು.