ರಾಜ್ಯ ಬಜೆಟ್ ಕಪ್ಪು ಬಿಳುಪು ಚಿತ್ರಕ್ಕೆ ಬಣ್ಣ ಬಳಿದು ಚಂದಗಾಣಿಸುವ ವಿಫಲ ಪ್ರಯತ್ನ, ಇದರಲ್ಲಿ ಜನರಿಗೆ ಮೋಸವಲ್ಲದೆ ಬೇರೆನಿಲ್ಲ: ಅಬ್ದುಲ್ ಮಜೀದ್ ಮೈಸೂರು

Prasthutha|

ಬೆಂಗಳೂರು: ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರ ಮಂಡಿಸಿದ 2023 – 24 ಸಾಲಿನ ಬಜೆಟ್ ಕಪ್ಪು ಬಿಳುಪು ಚಿತ್ರಕ್ಕೆ ಬಲವಂತಕ್ಕೆ ಬಣ್ಣ ಬಳಿದು ಚಂದವಾಗಿ ಕಾಣುವಂತೆ ಮಾಡುವ ವಿಫಲ ಪ್ರಯತ್ನವಾಗಿದೆ. ಇದರಲ್ಲಿ ಸಾಮಾನ್ಯ ಜನರಿಗೆ ಮೋಸವಲ್ಲದೆ ಮತ್ತೇನು ಇಲ್ಲ ಎಂದು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌’ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ತಿಳಿಸಿದ್ದಾರೆ.

- Advertisement -

ಕರ್ನಾಟಕದಲ್ಲಿ ಇನ್ನೆರಡು ತಿಂಗಳಲ್ಲಿ ಚುನಾವಣೆ ಬರಲಿರುವ ಕಾರಣ ಆ ನೆಪದಲ್ಲಿಯಾದರೂ ಜನತೆಗೆ ಒಂದಷ್ಟು ಉಪಯುಕ್ತ ಯೋಜನೆಗಳು, ಬಡವರ ಪರ, ರೈತ ಪರ ನೀತಿ, ಯೋಜನೆಗಳು ಘೋಷಣೆಯಾಗಬಹುದು ಎಂದು ನಿರೀಕ್ಷಿಸುತ್ತಿದ್ದ ಜನರಿಗೆ ಈ ಬಜೆಟ್ ಸಂಪೂರ್ಣ ನಿರಾಶೆ ಮೂಡಿಸಿದೆ. ಪ್ರಮುಖ ಕ್ಷೇತ್ರಗಳಿಗೆ ನೀಡುವ ಅನುದಾನದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಪ್ರಮಾಣದ ಅನುದಾನ ನೀಡಿರುವುದನ್ನು ಗಮನಿಸಿದರೆ ಕರ್ನಾಟಕ ರಾಜ್ಯದ ಬೊಕ್ಕಸ ಆರೋಗ್ಯಕರವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಅಂಕಿಗಳನ್ನು ದೊಡ್ಡದಾಗಿ ತೋರಿಸುವ ಮೂಲಕ ಅದರ ಮೂಲ ಮೌಲ್ಯವನ್ನು ಜಾಗರೂಕತೆಯಿಂದ ಬಚ್ಚಿಡುವಂತಹ ಪ್ರಯತ್ನ ಮಾಡಲಾಗಿದೆ. ಇದು ಸಂಪೂರ್ಣ ಕಣ್ಕಟ್ಟಿನ ಬಜೆಟ್ಟಾಗಿದ್ದು ಜನರನ್ನು ದಿಕ್ಕು ತಪ್ಪಿಸುವ ಬಿಜೆಪಿಯವರ ತಂತ್ರವಾಗಿದೆ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಕಳೆದ ಸಾಲಿನ ಬಜೆಟ್’ಗೆ ಹೋಲಿಸಿದರೆ ಈ ವರ್ಷ ಪ್ರಮುಖ ಕ್ಷೇತ್ರಗಳಿಗೆ ನೀಡುವ ಅನುದಾನದಲ್ಲಿ ಸಾಕಷ್ಟು ಇಳಿಕೆ ಕಂಡುಬರುತ್ತದೆ. ಆರೋಗ್ಯ ಕ್ಷೇತ್ರಕ್ಕೆ 2022-23 ರಲ್ಲಿ ಬಜೆಟ್ ನ 5.26% ಹಣ ಮೀಸಲಿಡಲಾಗಿತ್ತು. ಆದರೆ ಈ ಬಾರಿ ಅದನ್ನು 4.90% ಗೆ ಇಳಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ 2022-23 ರಲ್ಲಿ ಬಜೆಟ್ ನ 3.18% ಹಣ ಮೀಸಲಿಡಲಾಗಿತ್ತು. ಅದನ್ನು ಈ ಬಾರಿ 3.06% ಗೆ ಇಳಿಸಲಾಗಿದೆ. ಅಂತೆಯೇ, ಲೋಕೋಪಯೋಗಿ ಇಲಾಖೆಗೆ 2022-23 ರಲ್ಲಿ ಬಜೆಟ್ ನ 3.93% ಹಣ ಮೀಸಲಿಡಲಾಗಿತ್ತು. ಈ ಬಾರಿ ಅದನ್ನು 3.47% ಗೆ ಇಳಿಸಲಾಗಿದೆ. ಹಾಗೆಯೇ ಇಂಧನ ಇಲಾಖೆಗೆ 2022-23 ರಲ್ಲಿ ಬಜೆಟ್ ನ 4.76% ಹಣ ಮೀಸಲಿಡಲಾಗಿತ್ತು. ಈ ಬಾರಿ ಅದನ್ನು 4.46% ಗೆ ಇಳಿಸಲಾಗಿದೆ. ಜೊತೆಗೆ ನಗರಾಭಿವೃದ್ಧಿ ಇಲಾಖೆಗೆ 2022-23 ರಲ್ಲಿ ಬಜೆಟ್ ನ 6.04% ಹಣ ಮೀಸಲಿಡಲಾಗಿತ್ತು. ಈ ಬಾರಿ ಅದನ್ನು 5.80% ಗೆ ಇಳಿಸಲಾಗಿದೆ. ಈ ರೀತಿ ಪ್ರಮುಖ ಇಲಾಖೆಗಳ ಅನುದಾನದ ಪ್ರಮಾಣವನ್ನು ಜನರ ಗಮನಕ್ಕೆ ಬರದ ರೀತಿಯಲ್ಲಿ ಕಡಿತ ಮಾಡಲಾಗಿದೆ ಎಂದು ಅವರು ತಮ್ಮ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

- Advertisement -

ಏರು ಗತಿಯಲ್ಲಿರುವ ನಿರುದ್ಯೋಗದ ಬಗ್ಗೆ ಯಾವುದೇ ರೀತಿಯಾದ ಪ್ರಸ್ತಾಪ ಅಥವಾ ಯೋಜನೆಗಳನ್ನು ಬಜೆಟ್ ನಲ್ಲಿ ಸೇರಿಸಲಾಗಿಲ್ಲ. ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 2.5 ಲಕ್ಷ ಉದ್ಯೋಗಗಳ ನೇಮಕಾತಿಯ ಬಗ್ಗೆಯೂ ಕೂಡ ಯಾವುದೇ ಪ್ರಸ್ತಾಪ ಇಲ್ಲ. ಯುವಕರನ್ನು ಕೇವಲ ಕೋಮುವಾದದ ನಂಜಿನ ಮೂಲಕವೇ ಸೆಳೆಯುವುದು ಇವರ ಉದ್ದೇಶ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಅದಕ್ಕಿಂತಲೂ ಆಘಾತಕಾರಿ ಅಂಶವೆಂದರೆ ಕಳೆದ ಬಜೆಟ್’ನಲ್ಲಿ ಘೋಷಣೆ ಮಾಡಿದ 339 ಯೋಜನೆಗಳ ಪೈಕಿ 132 ಯೋಜನೆಗಳ ಅನುಷ್ಠಾನವೇ ಆಗಿಲ್ಲ. ಪೂರ್ಣ ವರ್ಷ ಅಧಿಕಾರ ನಡೆಸುವ ಅವಕಾಶ ಇದ್ದಾಗಿಯೂ ಇಂತಹ ಪರಿಸ್ಥಿತಿ ಇದ್ದರೆ ಇನ್ನು ಈ ಬಜೆಟ್ ಕೇವಲ ಎರಡು ತಿಂಗಳ ಆಯಸ್ಸು ಹೊಂದಿದೇ. ಈ ಅಲ್ಪ ಅವಧಿಯಲ್ಲಿ ಈ ಭ್ರಷ್ಟ ಬಿಜೆಪಿ ಸರ್ಕಾರ ಕೆಲವು ಯೋಜನೆಗಳ ಟೆಂಡರ್ ಕರೆದು ಅದರಲ್ಲಿ ಕಮಿಷನ್ ಹೊಡೆಯುವುದನ್ನು ಬಿಟ್ಟರೆ ಬೇರೇನನ್ನು ಕೂಡ ಮಾಡುವುದಿಲ್ಲ ಎನ್ನುವುದು ಸ್ಪಷ್ಟ ಎಂದು ಅವರು ಆರೋಪಿಸಿದರು.

ಒಟ್ಟಾರೆಯಾಗಿ ಇದೊಂದು ಬೋಗಸ್ ಮತ್ತು ಜನರನ್ನು ಯಾಮರಿಸಿ ಮತ ಪಡೆಯುವ ವಿಫಲ ಪ್ರಯತ್ನ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಹೇಳಿದ್ದಾರೆ.



Join Whatsapp