ಭೀಮಾ ಕೋರೆಗಾಂವ್ ವಿಜಯೋತ್ಸವ | ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸೇರಿದಂತೆ ಹಲವು ಪ್ರಮುಖರ ಭೇಟಿ; ಗೌರವ ನಮನ

Prasthutha|

ಪುಣೆ : ಭಾರತದ ಬಹುಸಂಖ್ಯಾತ ಸಮುದಾಯಗಳ ಹೆಮ್ಮೆಯ ಸಂಕೇತವಾದ ಭೀಮಾ ಕೋರೆಗಾಂವ್ ಯುದ್ಧದ ವಿಜಯೋತ್ಸವದ 203ನೇ ವರ್ಷದ ಹಿನ್ನೆಲೆಯಲ್ಲಿ ಇಂದು ಮಹಾರಾಷ್ಟ್ರ ಸರಕಾರದ ಡಿಸಿಎಂ ಸೇರಿದಂತೆ ಹಲವು ಪ್ರಮುಖರು ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಗೌರವ ಸಲ್ಲಿಸಿದರು. ಮಹಾರಾಷ್ಟ್ರ ಸರಕಾರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಹಲವು ಪ್ರಮುಖ ನಾಯಕರು ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಯುದ್ಧವೀರರಿಗೆ ಗೌರವ ನಮನ ಸಲ್ಲಿಸಿದರು.

- Advertisement -

ಮಹಾರಾಷ್ಟ್ರದ ಪೆರ್ನೆ ಗ್ರಾಮದಲ್ಲಿರುವ ‘ಜಯಸ್ತಂಭ’ ಸ್ಮಾರಕಕ್ಕೆ ಗೃಹಸಚಿವ ಅನಿಲ್ ದೇಶ್ ಮುಖ್, ಇಂಧನ ಸಚಿವ ಡಾ. ನಿತಿನ್ ರಾವತ್, ವಂಚಿತ್ ಬಹುಜನ ಆಘಾಡಿ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಸೇರಿದಂತೆ ನೂರಾರು ಗಣ್ಯರು ಸ್ಮಾರಕಕ್ಕೆ ಭೇಟಿ ನೀಡಿದರು.

ಕೊರೊನ ಹಿನ್ನೆಲೆಯಲ್ಲಿ ಸ್ಮಾರಕಕ್ಕೆ ಸಾರ್ವಜನಿಕರು ಭೇಟಿಯಾಗದಂತೆ ಮನವಿ ಮಾಡಲಾಗಿತ್ತು. ಮನೆಯಲ್ಲೇ ಉಳಿದು ಹುತಾತ್ಮರಿಗೆ ಗೌರವ ಸಲ್ಲಿಸಬೇಕು ಎಂದು ಡಿಸಿಎಂ ಅಜಿತ್ ಪವಾರ್ ಮನವಿ ಮಾಡಿದ್ದರು.

- Advertisement -

1818ರಲ್ಲಿ ಅಸ್ಪೃಶ್ಯತೆ ಜಾರಿಯಲ್ಲಿದ್ದ ಕಾಲದಲ್ಲಿ ಆಗಿನ ಪೇಶ್ವೆ ಆಡಳಿತದ ಸುಮಾರು 30,000 ಸೈನಿಕರನ್ನು ಕೇವಲ 500 ಮಹಾರ್ ಸೈನಿಕರು ಒಂದೇ ದಿನದ ಯುದ್ಧದಲ್ಲಿ ಸೋಲಿಸಿದ ಸ್ಮರಣಾರ್ಥವಾಗಿ ಈ ಸ್ಮಾರಕ ನಿರ್ಮಿಸಲಾಗಿದೆ. ಪ್ರತಿ ವರ್ಷ ಇಲ್ಲಿ ದೇಶಾದ್ಯಂತದಿಂದ ಲಕ್ಷಾಂತರ ಅಂಬೇಡ್ಕರ್ ಅನುಯಾಯಿಗಳು ಭೇಟಿ ನೀಡಿ, ಸ್ಮಾರಕಕ್ಕೆ ಗೌರವ ನಮನ ಸಲ್ಲಿಸುತ್ತಾರೆ.  



Join Whatsapp