ಬೆಂಗಳೂರು: ಟಿಪ್ಪು ಸುಲ್ತಾನ್ ಅವರ ತಲೆ ತೆಗೆದಂತೆ ಸಿದ್ದರಾಮಯ್ಯ ಅವರನ್ನು ಹೊಡೆಯಬೇಕು ಎಂಬ ಸಚಿವ ಅಶ್ವತ್ಥ್ ನಾರಾಯಣ ಅವರ ಹೇಳಿಕೆಗೆ ತೀವ್ರ ಆಕ್ರೋ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ‘ಅವರೇನು ಕುರಿಯೇ? ಇತಿಹಾಸದಲ್ಲಿ ಟಿಪ್ಪು ಅವರ ತಲೆ ತೆಗೆದಿರುವ ಬಗ್ಗೆ ದಾಖಲೆ ಎಲ್ಲಿವೆ? ನಾನು ಅಶ್ವತ್ಥ್ ನಾರಾಯಣ ಅವರಿಗೆ ಉತ್ತರವನ್ನು ನೀಡುವುದಿಲ್ಲ, ಅವರ ಹೇಳಿಕೆ ಖಂಡಿಸುವುದಿಲ್ಲ. ಅವರ ಹೇಳಿಕೆಗೆ ಬೊಮ್ಮಾಯಿ, ಯಡಿಯೂರಪ್ಪನವರು, ನಡ್ಡಾ ಅವರು ಉತ್ತರ ನೀಡಬೇಕು. ನಾನು ಆ ವ್ಯಕ್ತಿಯ ಬಗ್ಗೆ ಮಾತನಾಡಿ ನನ್ನ ಬಾಯಿ ಕೊಳಕು ಮಾಡಿಕೊಳ್ಳು ಇಚ್ಛಿಸುವುದಿಲ್ಲ. ಇನ್ನು ಟಿಪ್ಪು ಅವರ ವಿಚಾರದಲ್ಲಿ ರಾಷ್ಟ್ರಪತಿಗಳು ಬಂದು ಏನು ಮಾತನಾಡಿದ್ದಾರೆ ಎಂಬ ದಾಖಲೆಗಳಿವೆ’ ಎಂದು ತಿರುಗೇಟು ನೀಡಿದರು.
ಮೈಸೂರು ಕಾಂಗ್ರೆಸ್ ಕಚೇರಿಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಯೋಜನಾ ವೆಚ್ಚ ದುಪ್ಪಟ್ಟಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ಸರ್ಕಾರ 1 ಸಾವಿರ ಕೋಟಿ ಯೋಜನಾ ಅಂದಾಜು ವೆಚ್ಚವನ್ನು 2 ಸಾವಿರ ಕೋಟಿಗೆ ಹೆಚ್ಚಿಸುತ್ತಿದ್ದಾರೆ’ ಎಂದರು.
ಟೆಂಡರ್ ಪರಿಶೀಲನಾ ಸಮಿತಿ ರದ್ದು ಮಾಡಿದ್ದು ಡಿ.ಕೆ. ಶಿವಕುಮಾರ್ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ‘ಆ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ನಾನು ಕಾನೂನು ಬಾಹೀರವಾಗಿ ಮಾಡಿದ್ದರೆ ಕ್ರಮ ಕೈಗೊಳ್ಳಲಿ’ ಎಂದರು.
ಸುದೀಪ್ ಅವರ ಬಗ್ಗೆ ಕೇಳಿದ ಪ್ರಶ್ನೆಗೆ, ‘ಸುದೀಪ್ ನನ್ನ ಉತ್ತಮ ಸ್ನೇಹಿತ. ನಾವು ಲೋಕಾರೂಢಿಯಾಗಿ ರಾಜಕಾರಣದ ಬೆಳವಣಿಗೆ ಬಗ್ಗೆ ಮಾತನಾಡಿದ್ದೇವೆ. ಅವರು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಸಾಮಾಜಿಕ ಸೇವೆ ಮಾಡಿದ್ದಾರೆ. ನಾವು ಕೆಲವು ವಿಚಾರ ಚರ್ಚೆ ಮಾಡಿದ್ದೇವೆ. ನಾನು ಅವರಿಗೆ ಬಲವಂತ ಮಾಡುವುದಿಲ್ಲ. ನಾನು ನನ್ನ 35 ವರ್ಷಗಳ ಅನುಭವದಲ್ಲಿ ಕೆಲವು ವಿಚಾರ ಚರ್ಚೆ ಮಾಡಿದ್ದೇವೆ ಅಷ್ಟೇ’ ಎಂದು ತಿಳಿಸಿದರು.