ಹಿಂಸೆಗೆ ಕರೆ ನೀಡುವವರನ್ನು ಕೂಡಲೇ ಬಂಧಿಸಿ, ಜೈಲಿಗೆ ತಳ್ಳಿರಿ: ಪುರುಷೋತ್ತಮ ಬಿಳಿಮಲೆ ಒತ್ತಾಯ

Prasthutha|

ಮಂಗಳೂರು: ಕರ್ನಾಟಕದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ನಿನ್ನೆ ಬಿಜೆಪಿಯ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಮತ್ತು ನಳಿನ್ ಕುಮಾರ್ ಕಟೀಲ್ ಅವರು ನೇರವಾಗಿ ಹಿಂಸೆಗೆ ಕರೆ ನೀಡಿದ್ದಾರೆ. ಕಟೀಲ್ ಹೇಳಿಕೆಯ ಬಗ್ಗೆ ರಾಷ್ಟ್ರೀಯ ಚಾನೆಲ್ ಗಳಲ್ಲಿ ತೀವ್ರವಾದ ಆಕ್ರೋಶವೂ ವ್ಯಕ್ತವಾಗಿದೆ. ಆದ್ದರಿಂದ ಹಿಂಸೆಗೆ ಕರೆ ನೀಡುವವರನ್ನು ಕೂಡಲೇ ಬಂಧಿಸಿ, ಜೈಲಿಗೆ ತಳ್ಳಿರಿ ಎಂದು ಹಿರಿಯ ವಿದ್ವಾಂಸರಾದ ಪ್ರೊ.ಪುರುಷೋತ್ತಮ ಬಿಳಿಮಲೆ ಒತ್ತಾಯಿಸಿದ್ದಾರೆ.

- Advertisement -


‘ಟಿಪ್ಪುವನ್ನು ಪ್ರೀತಿಸುವವರು ಉಳಿಯಬಾರದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೊಪ್ಪಳದಲ್ಲಿ ಹೇಳಿದ್ದರೆ, ‘ಟಿಪ್ಪುವನ್ನು ಮೇಲಕ್ಕೆ ಕಳುಹಿಸಿದಂತೆ ಸಿದ್ದರಾಮಯ್ಯ ಅವರನ್ನೂ ಕಳುಹಿಸಬೇಕು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಾತನೂರಲ್ಲಿ ಹೇಳಿದ್ದಾರೆ. ಇವರಿಬ್ಬರ ಭಾಷಣದಿಂದ ಪ್ರೇರಿತನಾದ ಯಾರೋ ಒಬ್ಬನು ನೇರವಾಗಿ ಹಿಂಸೆಗೆ ಇಳಿದರೂ ಇಳಿಯಬಹುದು. ಗೌರಿ ಮತ್ತು ಕಲಬುರ್ಗಿ ಕೊಲೆ ಪ್ರಕರಣದಲ್ಲಿ ನಾವಿದನ್ನು ಕಂಡಿದ್ದೇವೆ ಎಂದರು.


ಇಂಥ ಹೇಳಿಕೆಯನ್ನು ಬಿಜೆಪಿಯೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಖಂಡಿಸದೇ ಹೋದರೆ ಕರ್ನಾಟಕದ ಚುನಾವಣಾ ಸಂದರ್ಭದಲ್ಲಿ ರಕ್ತದ ಹೊಳೆಯೇ ಹರಿಯಬಹುದು. ಚುನಾವಣೆಯೇ ನಡೆಯದಿರಬಹುದು. ಕಾರಣ, ಹಿಂಸೆಗೆ ಪ್ರಚೋದನೆ ನೀಡುವವರನ್ನು ಕೂಡಲೇ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (UAPA) ಅಡಿ ಬಂಧಿಸಿ ಜೈಲಿಗೆ ತಳ್ಳಬೇಕು ಎಂದು ಹೇಳಿದ್ದಾರೆ.
ಸರ್ವಜನಾಂಗದ ಶಾಂತಿಯ ತೋಟಕ್ಕೆ ಭಂಗಬರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದು ಎಂದು ಪುರುಷೋತ್ತಮ ಬಿಳಿಮಲೆ ತಮ್ಮ ಫೇಸ್ ಬುಕ್ ನಲ್ಲಿ ಬರೆದು ಒತ್ತಾಯಿಸಿದ್ದಾರೆ.



Join Whatsapp