ಬೆಂಗಳೂರು: ‘ಟಿಪ್ಪುವನ್ನು ಹೊಡೆದು ಹಾಕಿದಂತೆ ನನ್ನನ್ನೂ ಹೊಡೆದು ಹಾಕಬೇಕು ಎಂದು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಜನರಿಗೆ ಕರೆ ನೀಡಿದ್ದಾರೆ. ಜನರನ್ನು ಯಾಕೆ ಪ್ರಚೋದಿಸುತ್ತೀರಿ ಸಚಿವರೇ? ನೀವೇ ಕೋವಿ ಹಿಡಿದುಕೊಂಡು ಬಂದು ಬಿಡಿ’ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ರಾಜ್ಯದ ಒಬ್ಬ ಸಚಿವ ಈ ರೀತಿ ಬಹಿರಂಗವಾಗಿ ಹತ್ಯೆಗೆ ಕರೆ ನೀಡಿದ ನಂತರವೂ ಅವರ ವಿರುದ್ಧ ಪೊಲೀಸರು ಕ್ರಮಕೈಗೊಂಡಿಲ್ಲ ಎಂದಾದರೆ ಈ ರಾಜ್ಯವನ್ನು ಆಳುವವರು ಜೀವಂತವಾಗಿಲ್ಲ, ಸರ್ಕಾರ ಸತ್ತುಹೋಗಿದೆ ಎಂದೇ ಲೆಕ್ಕ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಅಶ್ವತ್ಥನಾರಾಯಣ್ ನೀಡಿರುವ ಹತ್ಯೆಯ ಕರೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರತಿಕ್ರಿಯೆ ತಿಳಿಯಲು ಬಯಸುತ್ತೇನೆ. ಮೌನ ಸಮ್ಮತಿಯ ಲಕ್ಷಣವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನನ್ನ ಹತ್ಯೆಗೆ ಅಶ್ವತ್ಥನಾರಾಯಣ್ ನೀಡಿದ ಕರೆಯಿಂದ ನನಗೆ ಆಶ್ಚರ್ಯವಾಗಿಲ್ಲ. ಗಾಂಧೀಜಿಯನ್ನು ಕೊಂದವರನ್ನೇ ಆರಾಧಿಸುತ್ತಿರುವ ಪಕ್ಷದ ನಾಯಕರಿಂದ ಕೊಲೆಗಡುಕತನವಲ್ಲದೇ ಪ್ರೀತಿ, ಕರುಣೆ, ಸ್ನೇಹವನ್ನು ನಿರೀಕ್ಷಿಸಲು ಸಾಧ್ಯವೇ?’ ಎಂದು ಅವರು ಕೇಳಿದ್ದಾರೆ.