ಉಡುಪಿ: ಇದೇ ತಿಂಗಳ 5 ರಂದು ಪಾಂಗಳ ದೇವಸ್ಥಾನದ ಬಳಿ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಪಾಂಗಾಳ ಶರತ್ ಶೆಟ್ಟಿ ಕೊಲೆ ಪ್ರಕರಣವನ್ನು ಭೇದಿಸಿರುವ ಉಡುಪಿ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಎಸ್ಪಿ ಅಕ್ಷಯ ಎಂ ಹಾಕೆ ಅವರು, ಸುರತ್ಕಲ್ ಕುಳಾಯಿಯ ದಿವೇಶ್ ಶೆಟ್ಟಿ(20), ಲಿಖಿತ್ ಕುಲಾಲ್ (21), ಆಕಾಶ್ ಕರ್ಕೇರ(24) ಹಾಗು ಪ್ರಸನ್ನ ಶೆಟ್ಟಿ(40) ಎಂಬವರನ್ನು ಬಂಧಿಸಲಾಗಿದೆ ಎಂದರು.
ಬಂಧಿತ ಆರೋಪಿಗಳ ಪೈಕಿ ದಿವೇಶ್ ಮತ್ತು ಲಿಖಿತ್’ನನ್ನು ಇಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 1 ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಆಕಾಶ್ ಮತ್ತು ಪ್ರಸನ್ನ ಶೆಟ್ಟಿಯನ್ನು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಕ್ಷಯ ತಿಳಿಸಿದರು.
ಈ ಕೊಲೆಯಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿ ಕಟಪಾಡಿಯ ಯೋಗೀಶ್ ಆಚಾರ್ಯ, ನಾಗರಾಜ್, ಭೂಗತ ಪಾತಕಿ ಕಲಿ ಯೋಗೀಶ್ ಮತ್ತು ಕೃತ್ಯಕ್ಕೆ ಸಹಕರಿಸಿದ ಮುಕೇಶ್ ಹಾಗೂ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗೆ ಶೋಧ ಕಾರ್ಯ ಮುಂದುವರೆಸಲಾಗಿದೆ ಎಂದರು.
ಪಾಂಗಾಳದಲ್ಲಿ ಜಾಗವೊಂದರ ವಿಷಯಕ್ಕೆ ಸಂಬಂಧಿಸಿ ಕಳೆದ ಡಿಸೆಂಬರ್ ತಿಂಗಳಲ್ಲಿ ಯೋಗೀಶ್ ಆಚಾರ್ಯ ಹಾಗೂ ಭರತ್ ಶೆಟ್ಟಿ ಹೋಗಿದ್ದ ವೇಳೆ ಕೆಲವು ವ್ಯಕ್ತಿಗಳು ಯೋಗೀಶ್ ಆಚಾರ್ಯನ ಮೇಲೆ ಹಲ್ಲೆ ನಡೆಸಿದ್ದರು. ಈ ಗಲಾಟೆಯ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಶರತ್ ಶೆಟ್ಟಿ ಹಲ್ಲೆಯ ವೇಳೆ ಯೋಗೀಶ್ ಸಹಾಯಕ್ಕೆ ಬಾರದೆ ಸ್ಥಳದಿಂದ ಕಾಲ್ಕಿತ್ತಿದ್ದನು. ಯೋಗೀಶ್ ಆಚಾರ್ಯ ಇದೇ ದ್ವೇಷವನ್ನಿಟ್ಟುಕೊಂಡು ಭೂಗತ ಪಾತಕಿ ಕಲಿ ಯೋಗೀಶನನ್ನು ಸಂಪರ್ಕಿಸಿ ಕೊಲೆಗೆ ಸ್ಕೆಚ್ ರೂಪಿಸಿದ್ದನು ಎಂದು ಅವರು ತಿಳಿಸಿದರು.