ನವದೆಹಲಿ: 2002ರ ಗುಜರಾತ್ ಗಲಭೆಯಲ್ಲಿ ಈಗಿನ ಪ್ರಧಾನಿ ಹಾಗೂ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಪಾತ್ರವನ್ನು ಪ್ರಶ್ನಿಸುವ ಬಿಬಿಸಿ- ಬ್ರಿಟಿಷ್ ಬ್ರಾಡಕಾಸ್ಟಿಂಗ್ ಕಾರ್ಪೊರೇಶನ್ನಿನ ತಯಾರಿಕೆಗಳಾದ ಎರಡು ಸಾಕ್ಷ್ಯ ಚಿತ್ರಗಳಿಗೆ ಬಿಜೆಪಿ ಸರಕಾರದ ವಿರೋಧದ ಪರಾಕಾಷ್ಠೆಯಾಗಿ ಮುಂಬೈ ಮತ್ತು ದಿಲ್ಲಿಯ ಬಿಬಿಸಿ ಕಚೇರಿಗಳ ಮೇಲೆ ಇಂದು ದಾಳಿ ನಡೆದಿರುವುದು ಸ್ಪಷ್ಟ ಎಂದು ವಿಪಕ್ಷಗಳು ಟೀಕಿಸಿವೆ.
ಬಿಬಿಸಿಯ ತೆರಿಗೆ ಮತ್ತು ಹಣ ವರ್ಗಾವಣೆಯಲ್ಲಿ ಹೆಚ್ಚು ಕಡಿಮೆ ಕಂಡು ಬಂದಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಆಪಾದಿಸಿದ್ದಾರೆ.
ದಿಲ್ಲಿಯ ಬಿಬಿಸಿ ಕಚೇರಿಯಲ್ಲಿ 20 ಮಂದಿ ಆದಾಯ ತೆರಿಗೆ ಅಧಿಕಾರಿಗಳು ನುಗ್ಗಿ ತಪಾಸಣೆ ನಡೆಸಿದರು. ಹೆಚ್ಚು ಕಡಿಮೆ ಅಷ್ಟೇ ಮಂದಿ ಮುಂಬೈ ಬಿಬಿಸಿ ಕಚೇರಿಯ ಮೇಲೆ ದಾಳಿ ನಡೆಸಿದ್ದರು ಎಂದು ತಿಳಿದು ಬಂದಿದೆ.
ಹಲವು ದಾಖಲೆಗಳನ್ನು ವಶಪಡಿಸಿಕೊಂಡ ಆದಾಯ ತೆರಿಗೆ ಇಲಾಖೆಯವರು ಪತ್ರಕರ್ತರ ಲ್ಯಾಪ್ ಟಾಪ್ ಮತ್ತು ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯಕ್ಕೆ ಕಚೇರಿಗಳ ಆದಾಯ ತೆರಿಗೆಯವರ ಹೊರತಾಗಿ ಬೇರೆಯವರಿಗೆ ಮುಚ್ಚಲಾಗಿದ್ದು, ಬಿಬಿಸಿ ಕೆಲಸಗಾರರು ಯಾವುದೇ ದತ್ತಾಂಶಗಳನ್ನು ಹಂಚಿಕೊಳ್ಳದಂತೆ ಸೂಚಿಸಲಾಗಿದೆ.
ಇದು ಸಮೀಕ್ಷೆಯೇ ಹೊರತು ತಪಾಸಣೆ ಅಲ್ಲ ಎಂದು ಹೇಳಿರುವ ಆದಾಯ ತೆರಿಗೆ ಇಲಾಖೆಯವರು ಫೋನುಗಳನ್ನು ಹಿಂದಿರುಗಿಸಲಾಗುವುದು ಎಂದಿದ್ದಾರೆ.
“ನಮಗೆ ಕೆಲವು ವಿವರಣೆಗಳು ಬೇಕಾಗಿವೆ. ಅದಕ್ಕಾಗಿ ಬಿಬಿಸಿ ಕಚೇರಿಗಳಿಗೆ ಬಂದು ಸಮೀಕ್ಷೆ ನಡೆಸಿದ್ದೇವೆ. ನಮ್ಮ ಅಧಿಕಾರಿಗಳು ಲೆಕ್ಕ ಪುಸ್ತಕಗಳ ಸಮೀಕ್ಷೆ ಸಹ ನಡೆಸುವರು; ತಪಾಸಣೆ ಅಲ್ಲ” ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ.
ಬಿಬಿಸಿಯ ಹಣಕಾಸು ಇಲಾಖೆಗೆ ಸಂಪೂರ್ಣ ಮಾಹಿತಿಗಳನ್ನು ನೀಡುವಂತೆ ಆದಾಯ ತೆರಿಗೆ ಇಲಾಖೆಯವರು ಕೇಳಿದ್ದಾರೆ.
‘ಇಂಡಿಯಾ: ದ ಮೋದಿ ಕ್ವಶ್ಚನ್’ ಎಂಬ ಸಾಕ್ಷ್ಯಚಿತ್ರದ ಕಾರಣಕ್ಕೆ ಬಿಬಿಸಿ ಇತ್ತೀಚೆಗೆ ಭಾರೀ ಸುದ್ದಿ ಮಾಡಿತ್ತು. ಜನವರಿ 21ರಂದು ಕೇಂದ್ರ ಸರಕಾರವು 2021ರ ತಂತ್ರಜ್ಞಾನ ಕಾಯ್ದೆಯಡಿ ಯೂಟ್ಯೂಬ್ ಮತ್ತು ಟ್ವಿಟರ್ ಮೊದಲಾದವುಗಳಿಂದ ಆ ಸಾಕ್ಷ್ಯಚಿತ್ರಗಳನ್ನು ತೆಗೆದುಹಾಕಿತ್ತು.
ವಿದ್ಯಾರ್ಥಿಗಳು, ಪ್ರತಿಪಕ್ಷಗಳು ಇದನ್ನು ಖಂಡಿಸಿದ್ದವು. ವಿದ್ಯಾರ್ಥಿಗಳು ಖಾಸಗಿಯಾಗಿ ಆ ಸಾಕ್ಷ್ಯಚಿತ್ರಗಳ ಪ್ರದರ್ಶನಗಳನ್ನೂ ಏರ್ಪಡಿಸಿದ್ದರು.
ಸಾಕ್ಷ್ಯಚಿತ್ರಗಳು ಮೋದಿ ಸರಕಾರದ ಹಿಂಸಾ ಕರಾಮತ್ತನ್ನು ತೋರಿಸಿರುವ ಬಗ್ಗೆ ಪ್ರತಿಪಕ್ಷಗಳು ಪ್ರಶ್ನಿಸಿದ್ದವು.
“ಬಿಬಿಸಿ ಕಚೇರಿಗಳ ಮೇಲೆ ಆದಾಯ ತೆರಿಗೆಯವರ ದಾಳಿಯ ವರದಿ, ವೋಹ್! ನಿಜವಾಗಿಯೂ ಎದುರು ನೋಡಿರದ ಕೃತ್ಯ” ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಟ್ವೀಟ್ ಮಾಡಿದ್ದಾರೆ.
ಇದೊಂದು ನೀತಿ ಹೊಸಕುವ ತುರ್ತು ಪರಿಸ್ಥಿತಿ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಬಿಜೆಪಿ ಸರಕಾರವನ್ನು ಬಿಬಿಸಿ ಕಚೇರಿಗಳ ಮೇಲಿನ ದಾಳಿಗೆ ಖಂಡಿಸಿದ್ದಾರೆ.
“ಇಲ್ಲಿ ನಾವು ಅದಾನಿ-ಹಿಂಡೆನ್ ಬರ್ಗ್ ವಿವಾದದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಯನ್ನು ಕೇಳುತ್ತಿದ್ದೇವೆ, ಅಲ್ಲಿ ಸರ್ಕಾರವು ಬಿಬಿಸಿಯನ್ನು ಕಾಡುತ್ತಿದೆ. ವಿನಾಶ ಕಾಲಕ್ಕೆ ವಿಪರೀತ ಬುದ್ದಿ ಎನ್ನುವಂತಾಗಿದೆ” ಎಂದು ಕಾಂಗ್ರೆಸ್ ನಾಯಕ ರಮೇಶ್ ಜೈರಾಮ್ ಟೀಕಿಸಿದ್ದಾರೆ.