ಬೆಂಗಳೂರು: ಕೃಷಿ ಬೆಳೆಗಳಿಗೆ ತಗುಲಿದ್ದ ರೋಗ ನಿವಾರಿಸಲು ಔಷಧಿ ಸಿಂಪಡಣೆಗೆ ರೈತರು ಉಪಯೋಗಿಸುತ್ತಿದ್ದ ಡ್ರೋನ್, ಈಗ ದೇಶ ಕಾಯುತ್ತಿರುವ ಗಡಿಪ್ರದೇಶದಲ್ಲಿರುವ ಯೋಧರಿಗೂ ಆಹಾರ ಪದಾರ್ಥಗಳನ್ನು ಪೂರೈಸಲು ಕಾರ್ಗೊ ರೂಪದಲ್ಲಿ ಆವಿಷ್ಕಾರಗೊಂಡಿದೆ. ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ರಕ್ಷಣಾ ಕ್ಷೇತ್ರದ ಗಮನ ಸೆಳೆಯುತ್ತಿದೆ.
ಕಾರ್ಗೊ ಡ್ರೋನ್ ಆಹಾರ, ನೀರು ಮುಂತಾದ ಅಗತ್ಯ ವಸ್ತುಗಳನ್ನು ಸುಲಭವಾಗಿ ಎತ್ತರದ ಬೆಟ್ಟದ ತುದಿಯವರೆಗೆ ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಯೋಧರು ಕಾರ್ಯ ನಿರ್ವಹಿಸುವ ಸ್ಥಳಕ್ಕೆ ಈ ಡ್ರೋನ್ ಸುಲಭವಾಗಿ ತಲುಪುತ್ತದೆ.
ಬೆಂಗಳೂರಿನ ಸ್ಕ್ಯಾನ್’ಡೋನ್ ಕಂಪನಿ ಆವಿಷ್ಕರಿಸಿದ ಕಾರ್ಗೊ ಡ್ರೋನ್ ವಿವಿಧ ರಾಜ್ಯಗಳು, ವಿದೇಶದ ಕಂಪನಿಗಳ ರಕ್ಷಣಾ ಸಾಮಗ್ರಿಗಳ ಜೊತೆ ಪ್ರದರ್ಶನ ಮಳಿಗೆಯಲ್ಲಿದೆ.
1 ಕೋಟಿಗೂ ಹೆಚ್ಚು ಬೆಲೆಯಿರುವ ಕಾರ್ಗೊ ಡ್ರೋನ್ 50 ಕೆ.ಜಿ ಸಾಮರ್ಥ್ಯದ ಪದಾರ್ಥಗಳನ್ನು ಸುಲಭವಾಗಿ ಕೊಂಡೊಯ್ಯತ್ತದೆ. ಬ್ಯಾಟರಿ ಆಧರಿಸಿ ಡೋನ್ ಚಲಿಸುತ್ತದೆ. ಒಮ್ಮೆ ರೀಚಾರ್ಜ್ ಮಾಡಿದರೆ, 30 ಕಿ.ಮೀನಷ್ಟು ದೂರ ಕ್ರಮಿಸಲಿದೆ ಎಂದು ತಿಳಿದು ಬಂದಿದೆ. ‘ಗಡಿಯಲ್ಲಿ ಮಳೆ, ಚಳಿ, ಬಿಸಿಲನ್ನೂ ಲೆಕ್ಕಿಸದೆ ಯೋಧರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಗಡಿಭಾಗದಲ್ಲಿ ರಸ್ತೆ ಮಾರ್ಗವಿಲ್ಲದ ಕಾರಣಕ್ಕೆ ಆಹಾರ ಪೂರೈಕೆ ಈಗಲೂ ಕಷ್ಟವಾಗುತ್ತಿದೆ. ಈ ಸಂಕಷ್ಟ ನಿವಾರಣೆ ಮಾಡಬೇಕು, ಯೋಧರಿಗೆ ಬಿಸಿಯಾದ ಆಹಾರ ತಕ್ಷಣವೇ ದೊರೆಯಬೇಕು ಎಂಬ ಉದ್ದೇಶದಿಂದ ಈ ಪುಟ್ಟ ಯಂತ್ರ ಆವಿಷ್ಕಾರ ಮಾಡಲಾಗಿದೆ. ರೈತರೂ ಕೃಷಿ ಪದಾರ್ಥಗಳ ಸಾಗಣೆಗೆ ಈ ಡ್ರೋನ್ ಬಳಕೆ ಮಾಡಿ ಕೊಳ್ಳಬಹುದು’ ಎಂದು ಡ್ರೋನ್ ಆಪರೇಟರೊಬ್ಬರು ಹೇಳಿದ್ದಾರೆ.