ಶ್ರೀನಗರ : ಜಾರಿ ನಿರ್ದೇಶನಾಲಯ (ಈಡಿ) ಆಡಳಿತಾರೂಢ ಪಕ್ಷಕ್ಕೆ ತನ್ನ ರಾಜಕೀಯ ವಿರೋಧಿಗಳನ್ನು ಬೇಟೆಯಾಡಲು ದಾಳವಾಗಿ ಬಳಕೆಯಾಗುತ್ತಿದೆ ಎಂದು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಆಪಾದಿಸಿದ್ದಾರೆ. ಅವರು ಜಾರಿ ನಿರ್ದೇಶನಾಲಯಕ್ಕೆ ಬರೆದಿರುವ ಪತ್ರದಲ್ಲಿ ಈ ವಿಷಯ ತಿಳಿಸಿದ್ದಾರೆ.
ಇಸಿಐಆರ್/16/ಎಚ್ ಐವಿ/2020ಕ್ಕೆ ಸಂಬಂಧಿಸಿ ಕಾಶ್ಮೀರದ ಹಲವು ಜನರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಸಮನ್ಸ್ ಜಾರಿಗೊಳಿಸಲ್ಪಟ್ಟ ವ್ಯಕ್ತಿಗಳ ನಡುವಿನ ಏಕಮಾತ್ರ ಸಾಮಾನ್ಯ ವಿಷಯ ಏನೆಂದರೆ, ಅವರೆಲ್ಲರೂ ನನ್ನ ಸಂಬಂಧಿಕರು ಅಥವಾ ಒಂದಲ್ಲ ಒಂದು ರೀತಿಯಲ್ಲಿ ಪರಿಚಿತರು ಎಂದು ಮೆಹಬೂಬಾ ಪತ್ರದಲ್ಲಿ ತಿಳಿಸಿದ್ದಾರೆ.
ಈ ಎಲ್ಲಾ ವ್ಯಕ್ತಿಗಳಲ್ಲಿ ನನ್ನ ರಾಜಕೀಯ ಮತ್ತು ಹಣಕಾಸು ವ್ಯವಹಾರಗಳ ಬಗ್ಗೆಯೇ ಪ್ರಶ್ನಿಸಲಾಗುತ್ತಿದೆ. ನನ್ನ ತಂದೆಯ ಸಮಾಧಿ ಮತ್ತು ಸ್ಮಾರಕದ ಬಗ್ಗೆ, ನನ್ನ ಸಹೋದರಿಯ ಹಣಕಾಸು ವ್ಯವಹಾರ, ಮನೆ ನಿರ್ಮಾಣ, ನನ್ನ ಸಹೋದರರ ಹಣಕಾಸು ಮತ್ತು ವೈಯಕ್ತಿಕ ವ್ಯವಹಾರಗಳ ಬಗ್ಗೆಯೇ ಕೇಳಲಾಗುತ್ತಿದೆ. ತುಂಬಾ ಹಳೆಯ ವಿಷಯವೇನಲ್ಲ, ಇತ್ತೀಚೆಗಷ್ಟೇ ನಡೆದ ಡಿಡಿಸಿ ಚುನಾವಣೆ ವೇಳೆ ಪಿಡಿಪಿಯ ಪ್ರಮುಖ ವ್ಯಕ್ತಿ ವಹೀದ್ ಪಾರ್ರಾ ಅವರನ್ನು ಅಸ್ತಿತ್ವದಲ್ಲೇ ಇಲ್ಲದ ಪ್ರಕರಣದಲ್ಲಿ ಎನ್ ಐಎ ಬಂಧಿಸಿತ್ತು, ಆದರೂ ಅವರು ಗೆದ್ದಿದ್ದಾರೆ. ನನ್ನ ಹಲವಾರು ಸಂಬಂಧಿಗಳು ಮತ್ತು ಪಕ್ಷದ ಮುಖಂಡರನ್ನು ಜಮ್ಮು-ಕಾಶ್ಮೀರ ಆಡಳಿತ ಕಾನೂನು ಬಾಹಿರ ವಶದಲ್ಲಿಟ್ಟುಕೊಂಡಿದೆ ಎಂದು ಪತ್ರದಲ್ಲಿ ಆಪಾದಿಸಿದ್ದಾರೆ.