ಬೆಂಗಳೂರು: ದೇಶದ ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿ ಆರ್. ಎನ್. ಕುಲಕರ್ಣಿ ಅವರ ಕೊಲೆಗೆ ಸಂಬಂಧಿಸಿ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಗಪ್ ಚುಪ್ ಆಗಿ ಕುಳಿತಿರುವ ರಾಜ್ಯ ಬಿಜೆಪಿ ಸರ್ಕಾರದ ನಡೆಯ ಬಗ್ಗೆ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್, ರಾಜ್ಯ ಸರ್ಕಾರದ ಮೇಲೆ ಮಾಫಿಯಾಗಳು ಹಿಡಿತ ಸಾಧಿಸಿದರೆ ಏನೆಲ್ಲ ಆಗಬಹುದು ಎಂಬುದಕ್ಕೆ ಈ ಮಾಧ್ಯಮ ಅಂಕಣ ಸಾಕ್ಷಿ. ದೇಶದ ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿಯಾಗಿದ್ದ ಆರ್. ಎನ್. ಕುಲಕರ್ಣಿ ಅವರ ಕೊಲೆಗೆ ಸಂಬಂಧಿಸಿದಂತೆ ಮೂರು ತಿಂಗಳಾದರೂ ಆರೋಪ ಪಟ್ಟಿ ದಾಖಲಾಗಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಮುಗುಮ್ಮಾಗಿ ಕುಳಿತಿದೆ. ಮೈಸೂರಿನಲ್ಲಿ ನವೆಂಬರ್ ತಿಂಗಳಲ್ಲಿ ನಡೆದ ಈ ಕೊಲೆ ಪ್ರಕರಣದ ಹಿಂದೆ ಭೂಮಾಫಿಯಾದ ಕೈವಾಡವಿರುವುದು ಸ್ಪಷ್ಟವಾಗಿದೆ. ತಮ್ಮ ನೆರೆ ಮನೆಯವರ ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕುಲಕರ್ಣಿ ಅವರು ದೂರು ದಾಖಲಿಸಿದ್ದರು. ಈ ದೂರಿನ ನಂತರ ಅವರ ಕೊಲೆಯಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.
ನಮ್ಮ ದೇಶದ ಗುಪ್ತಚರ ಇಲಾಖೆಯ ಉನ್ನತ ಅಧಿಕಾರಿಯಾಗಿದ್ದವರ ಕೊಲೆ ಪ್ರಕರಣವೂ ಸರ್ಕಾರಕ್ಕೆ ನಾಟುವುದಿಲ್ಲ ಎಂದರೆ ಏನು ಅರ್ಥ? ಮೂರು ತಿಂಗಳಾದರೂ ಆರೋಪ ಪಟ್ಟಿ ಸಿದ್ಧವಾಗಿಲ್ಲ ಎಂಬುದು ನಮ್ಮ ಪೊಲೀಸ್ ವ್ಯವಸ್ಥೆಯ ನಿಷ್ಕ್ರಿಯತೆಗೆ ಹಿಡಿದ ಕನ್ನಡಿ. ದೂರಿನನ್ವಯ ಅನಧಿಕೃತ ಕಟ್ಟಡದ ಬಗ್ಗೆ ಮೈಸೂರು ಮಹಾನಗರ ಪಾಲಿಕೆಯು ಯಾವುದೇ ಕ್ರಮ ಕೈಗೊಂಡಿಲ್ಲ. ರಿಯಲ್ ಎಸ್ಟೇಟ್ ಎಂಬುದು ದಂಧೆಕೋರರ ಅಡ್ಡೆಯಾಗಿದೆ. ಕಮಿಷನ್ ಗಿರಾಕಿಗಳೆಂದೇ ಕುಖ್ಯಾತವಾಗಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಇಂತಹ ವಿಷಯಗಳು ಗಂಭೀರವಲ್ಲ ಎಂದು ಟೀಕಿಸಿದೆ.
ಈ ಪ್ರಕರಣದ ನಂತರ ಜೀವಭಯದಿಂದಾಗಿ ಕುಲಕರ್ಣಿಯವರ ಪತ್ನಿ ಮನೆ ತೊರೆದು ವೃದ್ಧಾಶ್ರಮಕ್ಕೆ ಸೇರಿದ್ದಾರೆ. ದೇಶಕ್ಕೆ ಸೇವೆ ಸಲ್ಲಿಸಿದ ಅಧಿಕಾರಿ ಮತ್ತಾತನ ಕುಟುಂಬಕ್ಕೆ ರಕ್ಷಣೆ ಕೊಡದಷ್ಟು ಅಮಾನವೀಯವಾಗಿದೆ ಈ ಬಿಜೆಪಿ ಸರ್ಕಾರದ ಆಡಳಿತ. ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ಅವರೇ, ಈಗಲಾದರೂ ಸೂಕ್ತ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದೆ.