ಅಂಕಾರ: ಟರ್ಕಿ ಮತ್ತು ಸಿರಿಯಾ ದೇಶಗಳ ಗಡಿಯಲ್ಲಿ ನಡೆದ ಭೂಕಂಪನದಲ್ಲಿ ಮೃತಪಟ್ಟವರ ಸಂಖ್ಯೆ 15,000ಕ್ಕೇರಿದೆ. ಹಲವರು ನಾಪತ್ತೆಯಾಗಿರುವುದು ಕಂಡು ಬಂದಿದೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಬ್ ಎರ್ಡೋಗನ್ ಹೇಳಿದ್ದಾರೆ.
ನಾಲ್ಕನೆಯ ದಿನವೂ ಅವಶೇಷಗಳ ಅಡಿ ಶೋಧ ಮತ್ತು ರಕ್ಷಣಾ ಕಾರ್ಯ ಮುಂದುವರಿದಿದೆ. 25 ದೇಶಗಳ ರಕ್ಷಣಾ ಶೋಧಕ ತಂಡಗಳು ಬಂದಿದ್ದು, ಟರ್ಕಿಯ 24,000 ಮಂದಿ ತುರ್ತು ಸೇವಾ ದಳದವರೊಂದಿಗೆ ಸೇರಿಕೊಂಡಿದ್ದಾರೆ.
ಟರ್ಕಿಯ 8,000ದಷ್ಟು ಮತ್ತು ಸಿರಿಯಾದ 4,000ದಷ್ಟು ಜನರು ಈ ಭೂಕಂಪದಲ್ಲಿ ಮರಣ ಹೊಂದಿದ್ದಾರೆ. 1939ರಲ್ಲಿ ಟರ್ಕಿಯಲ್ಲಿ ನಡೆದ ಭೂಕಂಪದಲ್ಲಿ 33,000 ಜನರು ಮೃತರಾಗಿದ್ದರೆ, 1999ರ ಟರ್ಕಿ ನೆಲನಡುಕದಲ್ಲಿ 17,000 ಮಂದಿ ಪ್ರಾಣ ಕಳೆದುಕೊಂಡಿದ್ದರು.
ಸರ್ಕಾರಿ ಸಂಪನ್ಮೂಲಗಳು ಸೀಮಿತವಾಗಿರುವುದರಿಂದ, ಟರ್ಕಿಶ್ ನಾಗರಿಕರು ಪರಿಹಾರ ಪ್ರಯತ್ನಗಳಲ್ಲಿ ಸ್ವಯಂಸೇವಕರಾಗಿ ಮುಂದೆ ಬರುತ್ತಿದ್ದಾರೆ. ಮತ್ತು ವಾಯವ್ಯ ಸಿರಿಯಾದಲ್ಲಿ, ವಿಶ್ವಸಂಸ್ಥೆಯ ನೆರವು ಬಂಡುಕೋರರ ಹಿಡಿತದಲ್ಲಿರುವ ಪ್ರದೇಶವನ್ನು ತಲುಪುತ್ತಿಲ್ಲ ಎಂದು ಅಧಿಕಾರಿಗಳು ಮತ್ತು ಮಾನವೀಯ ಕಾರ್ಯಕರ್ತರು ತಿಳಿಸಿದ್ದಾರೆ.