ಬೆಂಗಳೂರು: ಮನೆಗಳ್ಳನ ಕೃತ್ಯಕ್ಕೆ ಸಾಥ್ ನೀಡಿದ ಆರೋಪದ ಮೇಲೆ ವಿವೇಕನಗರ ಪೊಲೀಸರು ಬಂಧಿಸಲು ಹೋದಾಗ ಗಿರವಿ ಅಂಗಡಿ ಮಾಲೀಕ ಹೈಡ್ರಾಮ ಮಾಡಿರುವ ಘಟನೆ ನಡೆದಿದೆ.
ಪೊಲೀಸ್ ಠಾಣೆಗೆ ಬರಲು ಒಪ್ಪದೇ ಪಟ್ಟು ಹಿಡಿದು ಅಂಗಡಿ ಒಳಗೆ ಕುಳಿತಿದ್ದ ಮಾಲೀಕನನ್ನು ಬಿಡದೆ ಪೊಲೀಸರು ಹೊತ್ತುಕೊಂಡು ಹೋಗಿದ್ದಾರೆ.
ಭವರ್ ಲಾಲ್ (51) ಬಂಧಿತ ಗಿರಿವಿ ಅಂಗಡಿ ಮಾಲೀಕನಾಗಿದ್ದಾನೆ. ಬಂಧನದ ವೇಳೆ ಈತ ಹೈಡ್ರಾಮ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಭವರ್ ಲಾಲ್, ಮನೆಗಳ್ಳತನ ಮಾಡುತ್ತಿದ್ದ ಆರೋಪಿಯ ಬಳಿ ಚಿನ್ನ ಖರೀದಿಸುತ್ತಿದ್ದ. ಈ ನಡುವೆ ಖದೀಮ ಶ್ರೀನಿವಾಸ್ ಅಲಿಯಾಸ್ ಅಪ್ಪುನನ್ನು ವಿವೇಕನಗರ ಠಾಣಾ ಪೊಲೀಸರು ಬಂಧಿಸಿದ್ದರು.
ವಿಚಾರಣೆ ವೇಳೆ ಆತ 15 ಮನೆಗಳಲ್ಲಿ ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಇದಾದ ಬಳಿಕ ಖದೀಮ ಚಿನ್ನವನ್ನು ಮಾರಿದ ಮೂಲವನ್ನು ಪೊಲೀಸರು ಹುಡುಕಲು ಆರಂಭಿಸಿದರು.
ಈ ವೇಳೆ ಭವರ್ ಲಾಲ್ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಭವರ್ ಲಾಲ್ ಬಳಿ ತೆರಳಿದ ಪೊಲೀಸರು ತನಿಖೆಗೆ ಸಹಕರಿಸುವಂತೆ ಸೂಚನೆ ನೀಡಿದ್ದರು. ಆದರೆ, ಪೊಲೀಸರ ವಿಚಾರಣೆಗೆ ಸ್ಪಂದಿಸದ ಭವರ್ ಲಾಲ್, ಉದ್ಧಟತನ ಮೆರೆದಿದ್ದ. ವಿಚಾರಣೆಗೆ ಬರುವಂತೆ ಹಲವು ಬಾರಿ ಕೇಳಿಕೊಂಡರು ಕ್ಯಾರೆ ಎನ್ನುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತನನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ. ಭವರ್ ಲಾಲ್ ಬಂಧನ ಸುಲಭವಾಗಿರಲಿಲ್ಲ. ಬಂಧನದ ವೇಳೆ ಆತನ ಮನೆಯಲ್ಲಿ ಭಾರೀ ಹೈಡ್ರಾಮವೇ ನಡೆಯಿತು. ಆತನ ಕುಟುಂಬಸ್ಥರು ಸಹ ಬಂಧನಕ್ಕೆ ವಿರೋಧಿಸಿ, ಪೊಲೀಸರಿಗೆ ಅಡ್ಡಿಪಡಿಸಿದರು. ಏನೇ ಹೇಳಿದರೂ ಭವರ್ ಲಾಲ್ ಮಾತ್ರ ಅಂಗಡಿ ಬಿಟ್ಟು ಹೊರಗೆ ಬರುತ್ತಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಪೊಲೀಸ್ ಸಿಬ್ಬಂದಿ ಅಂಗಡಿ ಒಳಗೆ ಹೋಗಿ ಭವರ್ ಲಾಲ್’ನನ್ನು ಹೊತ್ತುಕೊಂಡು ಹೋಗಿದ್ದಾರೆ. ಇದಕ್ಕೆ ಸಂಬಂಧಿಸಿದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.