ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶ್ರೇಷ್ಠ ಸಾಧನೆಗಾಗಿ ಶಿವಮೊಗ್ಗ ಜಿಲ್ಲಾ ಶಾಖೆಗೆ ರಾಜ್ಯ ಪ್ರಶಸ್ತಿಯ ಗರಿ

Prasthutha|

ಬೆಂಗಳೂರು: ರಾಜ್ಯದ ಏಳು ಸಾವಿರಕ್ಕೂ ಹೆಚ್ಚಿನ ಕಾರ್ಯನಿರತ ಪತ್ರಕರ್ತರ ಸದಸ್ಯತ್ವ ಹೊಂದಿರುವ ರಾಜ್ಯಸರ್ಕಾರದ ಮಾನ್ಯತೆ ಪಡೆದ ಏಕೈಕ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು (ಕೆಯುಡಬ್ಲ್ಯೂಜೆ) ಕೊಡಮಾಡುವ ರಾಜ್ಯಮಟ್ಟದ 2020-21ನೇ ಸಾಲಿನ ಚೊಚ್ಚಲ ಅತ್ಯುತ್ತಮ ಜಿಲ್ಲಾ ಸಂಘ ಪ್ರಶಸ್ತಿ ಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಘಟಕವು ಆಯ್ಕೆಯಾಗಿದೆ.

- Advertisement -


ಕಾರ್ಯನಿರತ ಪತ್ರಕರ್ತರ ಸಂಘಗಳನ್ನು ಸಂಘಟನಾತ್ಮಕವಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಅತ್ಯುತ್ತಮ ಜಿಲ್ಲಾ ಸಂಘ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಇದರ ಮೊದಲ ಪ್ರಶಸ್ತಿಯು ಅಧ್ಯಕ್ಷರಾದ ಕೆ. ವಿ. ಶಿವಕುಮಾರ್ ನೇತೃತ್ವದ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆಗೆ ಸಂದಿರುವುದು ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಹೆಗ್ಗಳಿಕೆಯಾಗಿದೆ.
ಕಳೆದ ಎಂಟು ವರ್ಷಗಳ ಕಾರ್ಯಸಾಧನೆಯನ್ನು ಗುರುತಿಸಿ, ಈ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಫೆ. 4 ಮತ್ತು 5 ರಂದು ವಿಜಯಪುರದಲ್ಲಿ ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 37ನೇ ರಾಜ್ಯ ಸಮ್ಮೇಳನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.


ಈ ತನಕ ಸಂಘವು ನಡೆಸಿರುವ ಕ್ರಿಯಾಶೀಲ ಕಾರ್ಯಚಟುವಟಿಕೆಗಳು, ಪತ್ರಿಕಾ ಸಂವಾದಗಳು, ಅರ್ಥಪೂರ್ಣ ಪತ್ರಿಕಾ ದಿನಾಚರಣೆಗಳು, ಹಿರಿಯ ಪತ್ರಕರ್ತರನ್ನು ಗುರುತಿಸಿ, ಗೌರವಿಸಿರುವುದು, ಪತ್ರಕರ್ತರ ಹಿತ ಕಾಯುವ ನಿಟ್ಟಿನಲ್ಲಿ ನಡೆಸಲಾದ ಹೋರಾಟಗಳು, ಪತ್ರಕರ್ತರಿಗಾಗಿ ನಡೆಸಲಾದ ಆರೋಗ್ಯ ತಪಾಸಣಾ ಶಿಬಿರಗಳು, ಸಂದರ್ಭಾನುಸಾರದ ಕ್ರೀಡಾ ಕೂಟಗಳು, ಪತ್ರಕರ್ತರ ಕುಟುಂಬ ವರ್ಗ, ಪತ್ರಿಕಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗಾಗಿ ನಡೆಸಲಾಗಿರುವ ವಿಭಿನ್ನ ಕಾರ್ಯಕ್ರಮಗಳು, ಪತ್ರಕರ್ತರ ಉನ್ನತೀಕರಣಕ್ಕಾಗಿ ನಡೆಸಲಾದ ಕಾರ್ಯಾಗಾರಗಳು, ವಿಶೇಷವಾಗಿ ಸಾಧಕ ಪತ್ರಕರ್ತರನ್ನು ಗುರುತಿಸಿ, ಜಿಲ್ಲಾ ಮಟ್ಟದಲ್ಲಿ ಹಿರಿಯ ಪತ್ರಕರ್ತರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಗಳನ್ನು ಸರಿ ಸುಮಾರು 5೦ಕ್ಕೂ ಹೆಚ್ಚು ಪತ್ರಕರ್ತರಿಗೆ ಪ್ರದಾನ ಮಾಡಿರುವುದು, ಜೊತೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಕೊಡಮಾಡುವ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮೊದಲಬಾರಿಗೆ ಅರ್ಥಪೂರ್ಣವಾಗಿ ಸಂಘಟಿಸಿರುವುದು.. ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

- Advertisement -


ಜೊತೆಗೆ ಬಹಳ ಮುಖ್ಯವಾಗಿ ಜಿಲ್ಲೆಯ ಎಲ್ಲ ತಾಲೂಕುಗಳ ಶಾಖೆಗಳೂ ಸಹ ಈ ಅವಧಿಯಲ್ಲಿ ನಡೆಸಿರುವ ರಚನಾತ್ಮಕ ಕಾರ್ಯಕ್ರಮಗಳು, ಜಿಲ್ಲಾ ಶಾಖೆಯೊಂದಿಗಿನ ನಿರಂತರ ಸಂಪರ್ಕ, ತಾಲೂಕು ಮಟ್ಟದಲ್ಲಿ ನಡೆಸಲಾದ ಕ್ರೀಡಾಕೂಟಗಳು, ಕಾರ್ಯಾಗಾರಗಳು, ಸಂವಾದಗಳು, ಪತ್ರಕರ್ತರ ಹಿತ ರಕ್ಷಣೆಯ ಕಾರ್ಯಚಟುವಟಿಕೆಗಳನ್ನು ಸಹ ಈ ಪ್ರಶಸ್ತಿಗಾಗಿ ಪರಿಗಣಿಸಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ತಿಳಿಸಿದ್ದಾರೆ.


ಅಭಿನಂದನೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿಷ್ಟಿತ ಪ್ರಶಸ್ತಿಗೆ ಕಾರಣರಾದ ಹಿಂದಿನ ಸಾಲಿನ ಅಧ್ಯಕ್ಷರಾದ ಎನ್. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ವೈದ್ಯ ಹಾಗೂ ಅಂದಿನ ಕಾರ್ಯಕಾರೀ ಮಂಡಳಿ, ಪ್ರಸ್ತುತ ಪ್ರಧಾನ ಕಾರ್ಯದರ್ಶಿ ವಿ.ಟಿ. ಹಾಗೂ ಕಾರ್ಯಕಾರೀ ಮಂಡಳಿ, ಎಲ್ಲ ತಾಲೂಕುಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯಕಾರಿ ಮಂಡಳಿಯ ಸದಸ್ಯರುಗಳಿಗೆ ಜಿಲ್ಲಾ ಸಂಘದ ಅಧ್ಯಕ್ಷ ಕೆ. ವಿ. ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.



Join Whatsapp