ಪತ್ರಿಕಾ ಜಾಹೀರಾತುಗಳಿಗೂ ತಟ್ಟಿದ ಬ್ರಾಹ್ಮಣ್ಯ; ಬ್ರಾಹ್ಮಣ ಸಂಪಾದಕರಿರುವ ಪತ್ರಿಕೆಗಳಿಗೆ ಜಾಹೀರಾತು ನೀಡುವಂತೆ ಬಿಜೆಪಿ ಸರ್ಕಾರ ಆದೇಶ

Prasthutha|

ಬೆಂಗಳೂರು: ಬ್ರಾಹ್ಮಣರ ಒಡೆತನದಲ್ಲಿರುವ ಪತ್ರಿಕೆಗಳಿಗೆ ಜಾಹೀರಾತು ನೀಡಬೇಕೆಂದು ಬೊಮ್ಮಾಯಿ ಸರಕಾರ ಸುತ್ತೋಲೆ ಹೊರಡಿಸಿದೆ.

- Advertisement -


ಸಿದ್ದರಾಮಯ್ಯ ನವರ ಸರ್ಕಾರದ ಅವಧಿಯಲ್ಲಿ ಒಬಿಸಿಗಳ ಮಾಲೀಕತ್ವದ ಪತ್ರಿಕೆಗಳನ್ನೂ ಪ್ರೋತ್ಸಾಹಿಸಲು ಜಾಹೀರಾತು ನೀಡಬೇಕೆಂದು ಬೇಡಿಕೆ ಬಂದ ಹಿನ್ನೆಲೆಯಲ್ಲಿ ಓಬಿಸಿ ಇಲಾಖೆಗೆ ಮೀಸಲಾದ ಅನುದಾನದಲ್ಲಿ ಪ್ರತಿ ತಿಂಗಳು ಜಾಹೀರಾತು ನೀಡಲು ಸಮ್ಮತಿಸಿತ್ತು. ಅದರಂತೆ ಇದೀಗ ಬೊಮ್ಮಾಯಿ ಸರ್ಕಾರ ಕೆಲ ತಿಂಗಳಿನಿಂದ ಹಿಂದಿನ ಸರ್ಕಾರದ ನಿರ್ಧಾರವನ್ನು ಜಾರಿಗೊಳಿಸಿತ್ತು.


ಇದೀಗ ಬ್ರಾಹ್ಮಣ ಸಂಪಾದಕ/ ಮಾಲೀಕರು ಕಳೆದ ಒಂದು ವರ್ಷದಿಂದ ಎಸ್ಸಿ/ ಎಸ್ಟಿ, ಓಬಿಸಿಗಳ ಮಾಲೀಕತ್ವದ ಪತ್ರಿಕೆಗಳಿಗೆ ಜಾಹೀರಾತು ನೀಡುತ್ತಿರುವಂತೆ ನಮಗೂ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ ಹಿನ್ನೆಲೆಯಲ್ಲಿ ತಕ್ಷಣವೇ ಸರ್ಕಾರ ಈ ಮನವಿಯನ್ನು ಈಡೇರಿಸಿದೆ.

- Advertisement -


ಇಲ್ಲಿ ಗಮನಿಸಬೇಕಾದ ಬಹಳ ಮುಖ್ಯವಾದ ಸಂಗತಿ ಎಂದರೆ ಪರಿಶಿಷ್ಟ ಮತ್ತು ಓಬಿಸಿಗಳಿಗೆ ಜಾಹೀರಾತು ನೀಡಲು ಅದರದ್ದೇ ಆದ ಅನುದಾನದ ಹೆಡ್ ಗಳಿದ್ದು ಆ ಹಣವನ್ನು ಬಳಕೆ ಮಾಡಿಕೊಡಲಾಗಿದೆ. ಆದರೆ ಬ್ರಾಹ್ಮಣರ ಪತ್ರಿಕೆಗಳಿಗೆ ಜಾಹೀರಾತು ನೀಡಲು ನಿರ್ದಿಷ್ಟ ಅನುದಾನ ಇಲ್ಲದಿದ್ದರೂ ಜಾಹೀರಾತು ನೀಡಲು ಸರ್ಕಾರ ನಿರ್ಧರಿಸಿರುವುದು ಟೀಕೆಗೆ ಕಾರಣವಾಗಿದೆ.


ಎಸ್ಸಿ/ ಎಸ್ಟಿ ಗಳ ಮಾಲೀಕತ್ವದ ಪತ್ರಿಕೆಗಳಿಗೆ ಸರ್ಕಾರವೇ ರೂಪಿಸಿರುವ “ಜಾಹೀರಾತು ನೀತಿ” ಯಂತೆ ಹೆಚ್ಚುವರಿ ಒಂದು ಪುಟ ಜಾಹೀರಾತು ನೀಡಲು ಕಳೆದ ಮೂರು ವರ್ಷಗಳಿಂದ ಮೀನಾಮೇಷ ಎಣಿಸುತ್ತಿರುವ ಸರ್ಕಾರ ದಿನಬೆಳಗಾಗುವುದರೊಳಗೆ ಬ್ರಾಹ್ಮಣ ರ ಮಾಲೀಕತ್ವದ ಪತ್ರಿಕೆಗಳಿಗೆ ಪ್ರತಿ ತಿಂಗಳು ಎರಡು ಪುಟ ಜಾಹೀರಾತು ನೀಡುವ ಆದೇಶವನ್ನು ಹೊರಡಿಸಿ ಕೃತಾರ್ಥವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಹಿಂದೂ ನಾವೆಲ್ಲಾ ಒಂದು ಎಂದು ಹೇಳುವ ಬಿಜೆಪಿ ಸರ್ಕಾರ, ದಲಿತ ಮತ್ತು ಹಿಂದುಳಿದ ವರ್ಗದವರ ಮೇಲೆ ಯಾಕೆ ಈ ರೀತಿಯ ಧೋರಣೆ ತಾಳುತ್ತಿದೆ. ಪತ್ರಿಕೆಯನ್ನು ಅದರ ಒಡೆಯರ ಜಾತಿ ನೋಡಿ ಅಧಿಕೃತವಾಗಿ ಪೋಷಿಸುವ ಅಜೆಂಡಾ ಹಿಂದುಗಳ ಬಿಜೆಪಿ ಪಕ್ಷದ್ದೋ ಅಥವಾ ಬ್ರಾಹ್ಮಣರ ಕೇಶವಕೃಪದ್ದೋ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



Join Whatsapp