ನವದೆಹಲಿ: ನಮೀಬಿಯಾದ ಬಳಿಕ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ 12 ಚಿರತೆಗಳನ್ನು ತರಲು ನಿರ್ಧರಿಸಲಾಗಿದ್ದು, ಈ ಸಂಬಂಧದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಕೇಂದ್ರ ಪರಿಸರ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.
ಫೆಬ್ರುವರಿ 12ರ ಮುಂಚಿತವಾಗಿ ಏಳು ಗಂಡು ಮತ್ತು ಐದು ಹೆಣ್ಣು ಚೀತಾಗಳನ್ನು ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಕರೆ ತರಲಾಗುವುದು ಎಂದು ಹೇಳಿದ್ದಾರೆ. ಕಳೆದ ಆರು ತಿಂಗಳಿಗೂ ಹೆಚ್ಚು ಸಮಯದಿಂದ ಕ್ವಾರಂಟೈನ್’ನಲ್ಲಿರುವ ಚೀತಾಗಳು, ಇದೇ ತಿಂಗಳಲ್ಲಿ ಭಾರತಕ್ಕೆ ತಲುಪುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿತ್ತು. ಆದರೆ ದಕ್ಷಿಣ ಆಫ್ರಿಕಾದಲ್ಲಿ ಪ್ರಕ್ರಿಯೆ ವಿಳಂಬಗೊಂಡಿದ್ದರಿಂದ ಹಸ್ತಾಂತರ ವಿಳಂಬಗೊಂಡಿತು ಎಂದು ಹೇಳಿದ್ದಾರೆ.
ಕಳೆದ ವರ್ಷ (ಸೆ.17) ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ನಮೀಬಿಯಾದಿಂದ ಎಂಟು ಚೀತಾಗಳನ್ನು ಕರೆತರಲಾಗಿತ್ತು.