ಭಾರತೀಯರು ಗಣತಂತ್ರದ ಸುರಕ್ಷತೆ ಮಾಡದೆ ಗಣತಂತ್ರ ದಿನವನ್ನು ಆಚರಿಸುವುದರಲ್ಲಿ ಅರ್ಥವಿಲ್ಲ: ಸುರ್ಜೇವಾಲ

Prasthutha|

ಮೈಸೂರು: ಮೈಸೂರು ಕಾಂಗ್ರೆಸ್ ಕಚೇರಿ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಸಚಿವ, ಶಾಸಕ ತನ್ವಿರ್ ಸೇಠ್, ಮಾಜಿ ಶಾಸಕರಾದ ಸೋಮಶೇಖರ್, ವಾಸು, ಧರ್ಮಸೇನ, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ವಕ್ತಾರ ಲಕ್ಷ್ಮಣ್, ಡಿಸಿಸಿ ಅಧ್ಯಕ್ಷರಾದ ಆರ್ ಮೂರ್ತಿ, ವಿಜಯಕುಮಾರ್, ಸೇವಾದಳ ರಾಜ್ಯಾಧ್ಯಕ್ಷ ರಾಮಚಂದ್ರ ಮತ್ತಿತರರು ಭಾಗವಹಿಸಿದ್ದರು.

- Advertisement -


ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಮಾತನಾಡಿ, 1950ರ ಜನವರಿ 26ರ ದಿನ ಪ್ರತಿಯೊಬ್ಬರ ಮನದಲ್ಲಿ ಅವಿಸ್ಮರಣೀಯವಾಗಿ ಉಳಿದಿದೆ. ಪ್ರತಿ ವರ್ಷ ಜ.26ರಂದು ಗಣತಂತ್ರ ದಿನವನ್ನು ಆಚರಿಸುತ್ತೇವೆ. ಆದರೆ ಇಲ್ಲಿರುವ ಕಾಂಗ್ರೆಸಿಗರು ಈ ಗಣತಂತ್ರದ ವಿಕಾಸ, ಗಣತಂತ್ರದ ಸಂವಿಧಾನ, ಗಣತಂತ್ರದ ಸುರಕ್ಷತೆಯನ್ನು ಮಾಡುತ್ತಿದ್ದಾರೆ. ಗಣತಂತ್ರ ಎಂದರೆ ಏನು? ಇಂದು ನಾವೆಲ್ಲರು ಈ ಪ್ರಶ್ನೆ ಕೇಳಿಕೊಳ್ಳಬೇಕಿದೆ. ಭಾರತದ ಗಣತಂತ್ರ ಎಂದರೆ ಈ ಒಂದು ದಿನವನ್ನು ಗಣತಂತ್ರ ಎನ್ನುತ್ತಾರಾ? ಕೇವಲ ಗಾಂಧಿಜೀ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದು ಕಾರ್ಯಕ್ರಮ ಆಚರಿಸುವುದು ಗಣತಂತ್ರವೇ? ಗಣತಂತ್ರ ಎಂದರೆ ಸಂವಿಧಾನ ಪುಸ್ತಕದ ಹೆಸರಲ್ಲ. ಇದು ದೇಶದ 140 ಕೋಟಿ ಜನರ ಹೆಸರಾಗಿದೆ. ಆದರೆ ದುರ್ದೈವ ಎಂದರೆ ಇಂದು ದೇಶದ ಗಣತಂತ್ರಯ ವ್ಯವಸ್ಥೆ ಹಾಗೂ ದೇಶದ ಜನರ ಮೇಲೆ ದಾಳಿ ನಡೆಯುತ್ತಿದೆ ಎಂದರು.


ಕಾರಣ, ಗಣತಂತ್ರ ಎಂದರೆ ಸ್ವಾಂತಂತ್ರ್ಯ, ಸಮಾನತೆ, ನ್ಯಾಯ, ಸಾಮಾಜಿಕ ನ್ಯಾಯ, ಬೇಧಬಾವ ತೊಲಗಿಸುವ, ಧರ್ಮ ಜಾತಿ ಹೆಸರಿನಲ್ಲಿರುವ ಅಸಮಾನತೆ ತೊಡೆದುಹಾಕುವ, ಸಂವಿಧಾನ ಹಾಗೂ ಅದರ ಮೂಲಭೂತ ಉದ್ದೇಶಗಳನ್ನು ರಕ್ಷಿಸುವ ಸಂಕಲ್ಪ ಮಾಡುವುದು ಗಣತಂತ್ರ ದಿನವಾಗಿದೆ. ಕಾಂಗ್ರೆಸಿಗರೂ ಸೇರಿದಂತೆ ಪ್ರತಿಯೊಬ್ಬ ಭಾರತೀಯರು ಗಣತಂತ್ರದ ಸುರಕ್ಷತೆ ಮಾಡದೇ ಈ ಗಣತಂತ್ರ ದಿನವನ್ನು ಆಚರಿಸುವುದರಲ್ಲಿ ಅರ್ಥವಿಲ್ಲ. ಇಂದು ದೇಶದ ಸಂವಿಧಾನ, ಮೂಲಭೂತ ಸಿದ್ಧಾಂತ ರಕ್ಷಣೆ ಮಾಡಬೇಕಿದೆ ಎಂದು ಹೇಳಿದರು.
ನಾವು ಒಬ್ಬರಿಗೊಬ್ಬರು, ಬಣ್ಣ, ಉಡುಗೆ, ಭಾಷೆ ವಿಚಾರವಾಗಿ ಭಿನ್ನತೆ ಇದೆ. ದೇಶದ ಜನರಲ್ಲಿ ಎಲ್ಲಿಯವರೆಗೂ ಈ ವಿಚಾರವಾಗಿ ಬೇಧಬಾವ ಇರುತ್ತದೆಯೋ, ಜಾತಿ ಧರ್ಮದ ಹೆಸರಲ್ಲಿ ವಿಭಜನೆ ಮಾಡಲಾಗುತ್ತದೆಯೋ, ಅನ್ಯಾಯ ಮಾಡುವುದನ್ನು ನಿಲ್ಲಿಸುವವರೆಗೂ ಗಣತಂತ್ರ ಪೂರ್ಣಗೊಳ್ಳುವುದಿಲ್ಲ. ನಾವು ಸಂವಿಧಾನದ ಹೆಸರಲ್ಲಿ ಅಧಿಕಾರಕ್ಕೆ ಬಂದು ರಾಜರಂತೆ ಆಳ್ವಿಕೆ ಮಾಡಲು ನಮ್ಮ ಮಹಾನ್ ನಾಯಕರು ಸಂವಿಧಾನವನ್ನು ನೀಡಿಲ್ಲ. ರಾಜಪ್ರಭುತ್ವವನ್ನು ಅಂತ್ಯಗೊಳಿಸಿ ಪ್ರಜೆಗಳೇ ಅಧಿಕಾರ ನಡೆಸಲು ಪ್ರಜಾಪ್ರಭುತ್ವವವನ್ನು ಅಸ್ಥಿತ್ವಕ್ಕೆ ತರಲಾಗಿದೆ. ಆದರೆ ಪ್ರಸ್ತುತ ಸರ್ಕಾರ ಸಂವಿಧಾನ ಹಾಗೂ ಅದರ ಮೌಲ್ಯಗಳ ಮೇಲೆ ದಾಳಿ ಮಾಡುತ್ತಲೇ ಇದ್ದಾರೆ ಎಂದು ಹೇಳಿದರು.

- Advertisement -


ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಇಂದು ಭಾರತಕ್ಕೆ ಸಂವಿಧಾನ ಕೊಟ್ಟ ಪವಿತ್ರ ದಿನ. ಕಾಂಗ್ರೆಸ್ ಈ ಪವಿತ್ರ ಗ್ರಂಥ ಕೊಟ್ಟು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ಶಕ್ತಿ ತುಂಬಿದ ದಿನ. ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವಕ್ಕೆ ಬಂದ ದಿನ ಎಂದರು.
ಈಗ ಜಾತಿ, ಧರ್ಮ, ಭಾಷೆ ಮತ್ತಿತರ ವಿಚಾರದಲ್ಲಿ ದ್ವೇಷ ಬಿತ್ತಿ ಸಮಾಜ ಒಡೆಯುವ ಕಾರ್ಯಕ್ಕೆ ಕೆಲವರು ಮುಂದಾಗಿದ್ದಾರೆ. ನಮ್ಮ ಮುಂದಿನ ಪೀಳಿಗೆಗೆ ಈ ವಿಚಾರವಾಗಿ ಅರಿವು ಮೂಡಿಸಬೇಕು. ನಮ್ಮ ರಕ್ಷಣೆ ಮಾಡುತ್ತಿರುವ ಸಂವಿಧಾನ ಬದಲಿಸಲು ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಆದರೆ ನಮ್ಮ ನಿಮ್ಮೆಲ್ಲರ ಗಟ್ಟಿತನ, ಅಂಬೇಡ್ಕರ್ ಅವರ ವಾದ, ಗಾಂಧಿ, ನೆಹರೂ, ಸರ್ದಾರ್ ಪಟೇಲರು ಹಾಕಿರುವ ಭದ್ರ ಬುನಾದಿ ಮೂಲಕ ಅದನ್ನು ಉಳಿಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.


ಎಲ್ಲಾ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳ ಮೇಲೆ ಒಂದು ಭಾಷೆಯನ್ನು ಹೇರಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ನಾವು ಯಾವುದೇ ಅವಕಾಶ ನೀಡುತ್ತಿಲ್ಲ. ನಮ್ಮ ನೋಟು ನೋಡಿ, ಅದರಲ್ಲಿ ವಿವಿಧ ಪ್ರಾಂತೀಯ ಭಾಷೆಗಳಿದ್ದು, ಆ ಪೈಕಿ ಕನ್ನಡವೂ ಒಂದು.
ದೇಶದ ಸಂವಿಧಾನ, ರಾಷ್ಟ್ರಧ್ವಜ, ಮೂಲಭೂತ ಹಕ್ಕುನ್ನು ನಾವು ಮರೆಯಬಾರದು. ದೇಶದ ಐಕ್ಯತೆ, ಭಾತೃತ್ವ, ಸಮಗ್ರತೆಗೆ ಧಕ್ಕೆಯಾಗಿದೆ ಎಂದು ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷನಾಗಿ ನಿಮ್ಮ ಪರವಾಗಿ ರಾಹುಲ್ ಗಾಂಧಿ ಅವರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.



Join Whatsapp