ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಜ 25) ದೇಶವನ್ನು ಉದ್ದೇಶಿಸಿ ಗಣರಾಜ್ಯೋತ್ಸವ ಭಾಷಣ ಮಾಡಲಿದ್ದಾರೆ.
ಸಂಜೆ 7 ಗಂಟೆಗೆ ರಾಷ್ಟ್ರಪತಿ ಅವರ ಭಾಷಣವು ದೇಶದ ಎಲ್ಲ ದೂರದರ್ಶನ ಹಾಗೂ ಆಕಾಶವಾಣಿ (AIR) ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ. ಭಾಷಣ ಮೊದಲು ಹಿಂದಿಯಲ್ಲಿ ನಂತರ ಇಂಗ್ಲಿಷ್ನಲ್ಲಿ ಪ್ರಸಾರವಾಗಲಿದೆ. ನಂತರ ಪ್ರಾದೇಶಿಕ ಭಾಷೆಗಳಲ್ಲಿ ಭಾಷಣ 7:30ಕ್ಕೆ ಪ್ರಸಾರವಾಗಲಿದೆ ಎಂದು ರಾಷ್ಟ್ರಪತಿ ಭವನವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಜನವರಿ 26ರಂದು ನಡೆಯಲಿರುವ 74ನೇ ಗಣರಾಜ್ಯೋತ್ಸವದ ಮುನ್ನಾ ದಿನ ಇಂದು(ಜ.25) ರಾಷ್ಟ್ರಪತಿ ಭಾಷಣ ಮಾಡಲಿದ್ದಾರೆ.
ಜನವರಿ 26ರಂದು ಕರ್ತವ್ಯಪಥದಲ್ಲಿ ಸಶಸ್ತ್ರಪಡೆಗಳಿಂದ ವೈಭವದ ಪರೇಡ್ ನಡೆಯಲಿದೆ. ಸೇನೆ, ಪ್ಯಾರಾ ಮಿಲಿಟರಿ, ಎನ್ಸಿಸಿ ಸೇರಿದಂತೆ ಹಲವು ತುಕಡಿಗಳು ಪಥಸಂಚಲನದಲ್ಲಿ ಪಾಲ್ಗೊಳ್ಳಲಿವೆ. ವಿವಿಧ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರದ ವಿವಿಧ ಇಲಾಖೆಗಳ ಟ್ಯಾಬ್ಲೊಗಳು ಪಥಸಂಚಲನದ ಪ್ರಮುಖ ಆಕರ್ಷಣೆಯಾಗಿರಲಿದೆ. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮೋಟಾರ್ ಸೈಕಲ್ ಕಸರತ್ತು, ವೈಮಾನಿಕ ಕಸರತ್ತು, ಸೇನಾ ಬ್ಯಾಂಡ್ನಿಂದ ಬೀಟಿಂಗ್ ರಿಟ್ರೀಟ್ ಕೂಡ ನಡೆಯಲಿದೆ.