ಬೀಜಿಂಗ್: ಚೀನಾದಲ್ಲಿ ಜನವರಿ 13 ಮತ್ತು 19 ರ ನಡುವೆ ಆಸ್ಪತ್ರೆಗಳಲ್ಲಿ ಸುಮಾರು 13,000 ಕೋವಿಡ್ ಸಂಬಂಧಿತ ಸಾವುಗಳು ವರದಿಯಾಗಿದೆ.
ಜನಸಂಖ್ಯೆಯ ಬಹುಪಾಲು ಜನರು ಈಗಾಗಲೇ ವೈರಸ್ನಿಂದ (Coronavirus) ಸೋಂಕಿಗೆ ಒಳಗಾಗಿದ್ದಾರೆ ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೊರೊನಾವೈರಸ್ ಸೋಂಕಿನಿಂದ ಉಂಟಾದ ಉಸಿರಾಟದ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾದ 681 ರೋಗಿಗಳು ಸಾವಿಗೀಡಾಗಿದ್ದಾರೆ. ಈ ಅವಧಿಯಲ್ಲಿ ಸೋಂಕಿನೊಂದಿಗೆ ಇತರ ಕಾಯಿಲೆಗಳಿಂದ 11,977 ಮಂದಿ ಸಾವನ್ನಪ್ಪಿದ್ದಾರೆ ಎಂದು ಚೀನಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.
ಅದೇ ವೇಳೆ ಮನೆಯಲ್ಲೇ ವೈರಸ್ನಿಂದ ಸಾವಿಗೀಡಾದವರ ಸಂಖ್ಯೆಯನ್ನು ಈ ಅಂಕಿಅಂಶಗಳಲ್ಲಿ ಉಲ್ಲೇಖಿಸಲಿಲ್ಲ. ಡಿಸೆಂಬರ್ನಲ್ಲಿ ಚೀನಾ ಶೂನ್ಯ-ಕೋವಿಡ್ ನೀತಿಯನ್ನು ಕೈಬಿಟ್ಟ ನಂತರ 600,000 ಕ್ಕೂ ಹೆಚ್ಚು ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಸಂಸ್ಥೆ ಅಂದಾಜಿಸಿದೆ.