ಪ್ರಜಾಧ್ವನಿ ಯಾತ್ರೆ ಎಂಬ ಹೆಸರಿನಲ್ಲಿ ಕಾಂಗ್ರೆಸ್ ಜನರನ್ನು ಮರುಳು ಮಾಡಲು ಹೊರಟಿದೆ: SDPI

Prasthutha|

- Advertisement -

ಕಳೆದ ನಾಲ್ಕು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಎಲ್ಲಿ ಅಡಗಿತ್ತು: ಅನ್ವರ್ ಸಾದತ್ ಬಜತ್ತೂರು ಪ್ರಶ್ನೆ

ಮಂಗಳೂರು: ಕಾಂಗ್ರೆಸ್ ಚುನಾವಣಾ ಸಮಯದಲ್ಲಿ ಪ್ರಜಾಧ್ವನಿ ಯಾತ್ರೆ ಎಂಬ ಹೆಸರಿನಲ್ಲಿ ಜನರನ್ನು ವಂಚಿಸಲು ಹೊರಟಿದೆ ಎಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಹೇಳಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು ಕಳೆದ ನಾಲ್ಕು ವರ್ಷಗಳಲ್ಲಿ ಜನರ ಹಕ್ಕನ್ನು, ಪ್ರತಿಭಟನೆಗಳನ್ನು, ಹೋರಾಟಗಳನ್ನು ಹತ್ತಿಕ್ಕುವಂತಹ ಹಾಗೂ ದಮನಿಸುವ ಕೃತ್ಯವನ್ನು ಫ್ಯಾಸಿಸ್ಟ್ ಮನಸ್ಥಿತಿಯ ಸರಕಾರಗಳು ಸಮರೋಪಾದಿಯಲ್ಲಿ ಮಾಡಿ ಜನರ ಮೇಲೆ ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸಿ, ಬೇರೆ ಬೇರೆ ರೀತಿಯ ಜನ ವಿರೋಧಿ ಹಾಗೂ ಸರಕಾರಿ ಪ್ರಾಯೋಜಿತ ಗಲಭೆ, ಹಲ್ಲೆ , ಅನೈತಿಕ ಪೊಲೀಸ್ ಗಿರಿ, ತಾರತಮ್ಯ ನಿಲುವುಗಳನ್ನು ಎಗ್ಗಿಲ್ಲದೆ ನಡೆಸಿದಾಗ ಅಧಿಕೃತ ವಿರೋಧ ಪಕ್ಷವಾದ ಕಾಂಗ್ರೆಸ್ ಯಾವ ಬಿಲದಲ್ಲಿ ಅಡಗಿ ಕುಳಿತಿತ್ತು ಅಂದು ತಳ ಸಮುದಾಯಗಳಿಗೆ ಆತ್ಮಸ್ಥೈರ್ಯ ತುಂಬುವ ಯಾತ್ರೆಗಳನ್ನು ಯಾಕೆ ಮಾಡಲಿಲ್ಲ, ಅಂದು ನಿಮ್ಮ ಪ್ರಜಾಧ್ವನಿ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದ್ದಾರೆ .

ಅಲ್ಪಸಂಖ್ಯಾತರು, ದಲಿತರು ಸೇರಿದಂತೆ ಜನಸಾಮಾನ್ಯರು ಸಂಕಷ್ಟಗಳ ಮೇಲೆ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾಗ
ಯಾವುದೇ ಯಾತ್ರೆ ಪ್ರತಿಭಟನೆ ನಡೆಸದೆ ಅಂದು ಕೋಮಾದಲ್ಲಿ ಇದ್ದ ಕಾಂಗ್ರೆಸ್ ಈಗ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆ ಎಚ್ಚೆತ್ತುಕೊಂಡು ಯಾತ್ರೆ, ಘೋಷಣೆ, ಸುಳ್ಳು ಭರವಸೆಗಳನ್ನು ನೀಡುತ್ತಾ ಜನರನ್ನು ಮಂಕು ಮರುಳು ಮಾಡುವ ನೀಚ ರಾಜಕೀಯವನ್ನು ಮಾಡಲು ಹೊರಟಿರುವುದು ಅದರ ವಂಚನೆಯ ಇತಿಹಾಸದ ಮುಂದುವರೆದ ಭಾಗವಾಗಿದೆ ಇದನ್ನು ಪ್ರಜ್ಞಾವಂತರ ಜಿಲ್ಲೆಯ ಬುದ್ದಿವಂತ ಜನತೆ ಅರ್ಥ ಮಾಡಿಕೊಂಡಿದ್ದಾರೆ ಎಂದರು.

ದೇಶಾದ್ಯಂತ ಜನರ ವಿಶ್ವಾಸವನ್ನು ಕಳೆದುಕೊಂಡು ಪತನದಂಚಿಗೆ ತಲುಪಿದ ಕಾಂಗ್ರೆಸ್ ಪಕ್ಷದ ಡಬ್ಬಲ್ ಗೇಮ್ ಆಟ ಇನ್ನು ಹೆಚ್ಚು ಕಾಲ ನಡೆಯುವುದಿಲ್ಲ , ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಪಸಂಖ್ಯಾತರ, ದಲಿತರ ಹಾಗೂ ಹಿಂದುಳಿದ ವರ್ಗಗಳ ಮತಗಳನ್ನು ಪಡೆದುಕೊಂಡು ನಿರಂತರವಾಗಿ ಅಧಿಕಾರದ ಸರ್ವ ಸುಖಗಳನ್ನು ಅನುಭವಿಸಿದ ಕಾಂಗ್ರೆಸ್ ಪಕ್ಷದ ನಾಯಕರು ಈ ಸಮುದಾಯದ ಜನಸಾಮಾನ್ಯರ ಸಮಸ್ಯೆಗೆ ಯಾವ ರೀತಿಯ ಸ್ಪಂದನೆ ನೀಡಿದ್ದಾರೆ. ಮುಸ್ಲಿಂ , ಕ್ರೈಸ್ತ, ದಲಿತರ ಮೇಲೆ ನಿರಂತರವಾಗಿ ಹಲ್ಲೆ, ದಾಳಿ ,ಕೊಲೆಗಳು , ವಿದ್ಯಾರ್ಥಿನಿಯರು ಶಿರವಸ್ತ್ರದ ನಿಷೇಧ, ವ್ಯಾಪಾರಿಗಳ ಮೇಲೆ ಬಹಿಷ್ಕಾರ ಗಳು ನಡೆದಾಗ ಸೈಲೆಂಟ್ ಮೂಡಿನಲ್ಲಿ ಇದ್ದ ಕಾಂಗ್ರೆಸ್ ಪಕ್ಷದ ವಂಚನೆಯನ್ನು ಜಿಲ್ಲೆಯ ಜನತೆ ಅರ್ಥ ಮಾಡಿಕೊಂಡಿದ್ದಾರೆ. ಯಾವುದಾದರೂ ಒಬ್ಬ ಕಾಂಗ್ರೆಸ್ ನಾಯಕ ಸಂಘಪರಿವಾರದ ಹಿಡೆನ್ ಅಜೆಂಡಾವನ್ನು ಎದುರಿಸಿ ಹೇಳಿಕೆ ಕೊಟ್ಟರೆ ಕೂಡಲೇ ಅವನಿಗೆ ಶೋಕಾಸ್ ನೋಟಿಸ್ ನೀಡಿ ಅದರ ವಿರುದ್ಧ ಬ್ಯಾಲೆನ್ಸಿಂಗ್ ಹೇಳಿಕೆ ನೀಡುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ನಿಲುವು ಏನು ಎಂಬುದು ಸ್ಪಷ್ಟವಾಗಿ ತಿಳಿಸಿ. ದೇಶದ ಇತಿಹಾಸವನ್ನು ಬದಲಿಸಲು ಹೊರಟ ಮನುವಾದಿ ಶಕ್ತಿಗಳ ಮುಂದೆ ಮಂಡಿಯೂರುವ ಗುಲಾಮಗಿರಿಯ ರಾಜಕೀಯ ಡ್ರಾಮಾಗಳು ಹೆಚ್ಚು ಕಾಲ ನಡೆಯುವುದಿಲ್ಲ . ಅಲ್ಪಸಂಖ್ಯಾತರು ದಲಿತರು ಕಣ್ಣುಮುಚ್ಚಿ ನಮಗೆ ಓಟು ಹಾಕುತ್ತಾರೆ ಎಂಬುದು ಕೇವಲ ನಿಮ್ಮ ಹಗಲು ಕನಸು ಮಾತ್ರ ದಯವಿಟ್ಟು ಅಂತಹ ಭ್ರಮೆಯಿಂದ ಹೊರಗೆ ಬಂದು ಜವಬ್ದಾರಿಯುತ ವಿರೋಧ ಪಕ್ಷವಾಗಿ ಕಾಂಗ್ರೆಸ್ ವರ್ತಿಸಬೇಕು . ದೇಶದ ಎಲ್ಲಾ ವರ್ಗದ ನಾಗರಿಕರಿಗೆ ಸಮಾನ ಹಕ್ಕುಗಳನ್ನು, ಅವಕಾಶಗಳನ್ನು ಖಾತ್ರಿ ಪಡಿಸುವ ಸಲುವಾಗಿ ಪ್ರಾಮಾಣಿಕ ಹೋರಾಟಗಳನ್ನು ಕೈಗೆತ್ತಿಕೊಂಡಲ್ಲಿ ಅದನ್ನು SDPI ಸ್ವಾಗತಿಸುತ್ತದೆ ಅದು ಬಿಟ್ಟು ಚುನಾವಣಾ ಸಂದರ್ಭದಲ್ಲಿ ಮಾತ್ರ ಇಂತಹ ಬೋಗಸ್ ಯಾತ್ರೆಗಳನ್ನು ಸಂಘಟಿಸಿ ಮತದಾರರ ಕಿವಿಗೆ ಹೂ ಇಡಲು ಪ್ರಯತ್ನಿಸಿದರೆ ಕಾಂಗ್ರೆಸ್ ಬಂಡವಾಳವನ್ನು ಬಯಲು ಮಾಡಲು SDPI ಪಕ್ಷಕ್ಕೆ ಚೆನ್ನಾಗಿ ಗೊತ್ತಿದೆ ಎಂದು ಅನ್ವರ್ ಸಾದತ್ ಎಚ್ಚರಿಸಿದ್ದಾರೆ.



Join Whatsapp