ಹುಬ್ಬಳ್ಳಿ: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರಿಗೂ ಅಲ್ಪಸಂಖ್ಯಾತರ ಮೇಲೆ ಈಗ ಪ್ರೀತಿ ಬಂದಿದೆ. ಬಿಜೆಪಿಯವರಿಗೆ ಎಷ್ಟು ಕಾಳಜಿ ಇದೆ ಎಂಬುದು ನಮಗೆ ಗೊತ್ತು. ರಾಜ್ಯಕ್ಕೆ ಬಂದಿರುವ ಮೋದಿ ಅವರು, ಸರ್ಕಾರದ ವ್ಯಾಪಕ ಭ್ರಷ್ಟಾಚಾರಕ್ಕೆ ಉತ್ತರಿಸಬೇಕು ಎಂದರು.
ಇದು ಭರವಸೆಗಳ ಹಾಗೂ ಬಿ ರಿಪೋರ್ಟ್ ಸರ್ಕಾರ. ರಾಜ್ಯದಲ್ಲಿ ನಡೆದಿರುವ ಸಾಕಷ್ಟು ಭ್ರಷ್ಟಾಚಾರ ಹಾಗೂ ಹಗರಣಗಳ ಬಗ್ಗೆ ಇನ್ನೂ ಉತ್ತರ ಸಿಕ್ಕಿಲ್ಲ. ಪಿಎಸ್ಐ ನೇಮಕಾತಿ, ಲೋಕೋಪಯೋಗಿ ಇಲಾಖೆಯ ಪ್ರತಿಯೊಂದು ಕಾಮಗಾರಿಯಲ್ಲಿ ಕಮಿಷನ್, ಇದನ್ನು ಪ್ರಶ್ನೆ ಮಾಡಿದ ಕೆಂಪಣ್ಣ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಮೋದಿಯವರು ಉತ್ತರ ಕೊಡಲಿ ಎಂದು ಸವಾಲು ಹಾಕಿದರು.