ಪುತ್ತೂರು: ಮುಂಡೂರಿನ ಜಯಶ್ರೀ ಎಂಬ ಯುವತಿಯ ಹತ್ಯೆಯನ್ನು ಎಸ್’ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹೀಮ್ ಪುತ್ತೂರು ತೀವ್ರವಾಗಿ ಖಂಡಿಸಿದ್ದು, ಕೊಲೆಗಡುಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿ ಅವರು, ಸಂತ್ರಸ್ತ ಕುಟುಂಬಕ್ಕೆ ಎಸ್’ಡಿಪಿಐ ಸಂತಾಪ ಸೂಚಿಸುತ್ತದೆ. ಜಯಶ್ರೀ ಕುಟುಂಬ ಆರ್ಥಿಕವಾಗಿ ಬಡವರಾಗಿದ್ದು, ಕಳೆದ ಕೊರೋನಾ ಸಮಯದಲ್ಲಿ ಆಕೆಯ ತಂದೆಯು ನಿಧನ ಹೊಂದಿದ್ದರು. ಈಕೆಯೇ ಕೆಲಸಕ್ಕೆ ಹೋಗಿ ಕುಟುಂಬವನ್ನು ಸಾಕಿ ಕುಟುಂಬದ ಆಧಾರ ಸ್ತಂಭವಾಗಿದ್ದಳು. ಈಗ ಈಕೆಯು ಭಗ್ನ ಪ್ರೇಮಿಯಿಂದ ಕೊಲೆಯಾಗಿ ಕುಟುಂಬ ಅತಂತ್ರವಾಗಿದೆ. ಸರ್ಕಾರವೂ ಕೂಡಲೇ ಈ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರವನ್ನು ಒದಗಿಸಬೇಕು ಹಾಗೂ ಆಕೆಯ ತಮ್ಮನಿಗೆ ಸರ್ಕಾರಿ ಉದ್ಯೋಗ ಕೊಡಿಸಿ ಕುಟುಂಬಕ್ಕೆ ನೈತಿಕ ಬೆಂಬಲ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಬಾಳಿ ಬದುಕಬೇಕಾದ ಸಣ್ಣ ಪ್ರಾಯದಲ್ಲೇ ದುಷ್ಕರ್ಮಿಯ ಕೈಯಿಂದ ಕೊಲೆಗೀಡಾದ ಜಯಶ್ರೀಯ ಕುಟುಂಬಕ್ಕೆ ಮತ್ತು ಸ್ನೇಹಿತರಿಗೆ ಈಕೆಯ ಅಕಾಲಿಕ ಮರಣವನ್ನು ಸಹಿಸುವ ಶಕ್ತಿಯನ್ನು ಸೃಷ್ಟಿಕರ್ತನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಅವರು ಸಂತಾಪ ಸೂಚಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.