ಬಲವಂತದ ಮತಾಂತರ ಪ್ರಶ್ನಿಸಿದ್ದ ಅರ್ಜಿ: ಸುಪ್ರೀಂ ಪೀಠದಲ್ಲಿ ಬದಲಾವಣೆ

Prasthutha|

ನವದೆಹಲಿ: ದೇಶದಲ್ಲಿ ನಡೆಯುತ್ತಿದೆ ಎನ್ನಲಾದ ಬಲವಂತದ ಮತ್ತು ಮೋಸದ ಮತಾಂತರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡ, ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಇನ್ನು ಮುಂದೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ.

- Advertisement -


ಈ ಹಿಂದೆ ನ್ಯಾ. ಎಂ. ಆರ್. ಶಾ ನೇತೃತ್ವದ ಪೀಠ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿತ್ತು, ಅರ್ಜಿಯಲ್ಲಿ ಕೆಲ ಅಲ್ಪಸಂಖ್ಯಾತ ಧರ್ಮಗಳ ವಿರುದ್ಧ ನೀಡಿದ ಹೇಳಿಕೆಗಳನ್ನು ತೆಗೆದುಹಾಕಲು ಅದು ನಿರಾಕರಿಸಿತ್ತು. ಹಿಂದಿನ ವಿಚಾರಣೆ ವೇಳೆ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರ ಕೋರಿಕೆಯ ಮೇರೆಗೆ ಪ್ರಕರಣದ ದಾವೆ ಶೀರ್ಷಿಕೆಯನ್ನು ಮತಾಂತರ ಕುರಿತಾದ ಪ್ರಕರಣ ಎಂದು ಪೀಠ ಬದಲಿಸಿತ್ತು.


ಶಾ ನೇತೃತ್ವದ ಪೀಠ ಬರುವ ಫೆಬ್ರುವರಿಯಲ್ಲಿ ಪ್ರಕರಣದ ವಿಚಾರಣೆ ನಡೆಸಬೇಕಿತ್ತು. ಆದೆ ಸಿಜೆಐ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಜನವರಿ 16ಕ್ಕೆ ಪ್ರಕರಣದ ವಿಚಾರಣೆ ನಡೆಸಲಿದೆ. ವಿವಿಧ ರಾಜ್ಯಗಳಲ್ಲಿ ಧಾರ್ಮಿಕ ಮತಾಂತರದ ವಿರುದ್ಧದ ಕಾನೂನುಗಳನ್ನು ಪ್ರಶ್ನಿಸುವ ಅರ್ಜಿಗಳನ್ನು ಸಿಜೆಐ ನೇತೃತ್ವದ ಪೀಠ ಆಲಿಸುತ್ತಿದ್ದು, ಅದರೊಂದಿಗೆ ಪ್ರಸ್ತುತ ಪ್ರಕರಣದ ವಿಚಾರಣೆಯೂ ನಡೆಯಲಿದೆ.

- Advertisement -


ತನಗೆ ಮತಾಂತರ ವಿರೋಧಿ ಕಾನೂನುಗಳಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ವರ್ಗಾಯಿಸಬೇಕೆ ಎಂದು ನಿರ್ಧರಿಸುವ ನಿಟ್ಟಿನಲ್ಲಿ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಇಂತಹ ಪ್ರಕರಣಗಳ ವಿವರವನ್ನು ಈ ಹಿಂದೆ ಸಿಜೆಐ ನೇತೃತ್ವದ ಪೀಠ ಕೇಳಿತ್ತು.


ಮೋಸದ ಮತ್ತು ದಿಕ್ಕುತಪ್ಪಿಸುವ ಧಾರ್ಮಿಕ ಮತಾಂತರವು ದೇಶಾದ್ಯಂತ ವ್ಯಾಪಕವಾಗಿದ್ದು ಅದು ಒಡ್ಡುತ್ತಿರುವ ಬೆದರಿಕೆಗೆ ಕಡಿವಾಣ ಹಾಕುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಅರ್ಜಿ ವಿವರಿಸಿತ್ತು.
ಉಪಾಧ್ಯಾಯರ ಮನವಿಯಲ್ಲಿ, ಬಲವಂತದ ಧಾರ್ಮಿಕ ಮತಾಂತರಗಳನ್ನು ನಿಭಾಯಿಸಲು ಕಠಿಣ ಕ್ರಮಗಳನ್ನು ಕೋರಲಾಗಿದೆ. ದೇಶಾದ್ಯಂತ ಮೋಸದ ಮತ್ತು ಮೋಸದ ಧಾರ್ಮಿಕ ಮತಾಂತರ ನಡೆಯುತ್ತಿದ್ದು, ಇದರ ಹಾವಳಿಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಅರ್ಜಿಯಲ್ಲಿ ಹೇಳಲಾಗಿದೆ.


ನ್ಯಾ. ಶಾ ನೇತೃತ್ವದ ಪೀಠ ಈ ಹಿಂದಿನ ವಿಚಾರಣೆ ಸಂದರ್ಭದಲ್ಲಿ ಔದಾರ್ಯದ ಸೋಗಿನಲ್ಲಿ ನಡೆಯುವ ಮತಾಂತರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಇಂತಹ ಸಂದರ್ಭಗಳಲ್ಲಿ ಔದಾರ್ಯ ತೋರುವ ವ್ಯಕ್ತಿಗಳ ಉದ್ದೇಶವನ್ನು ಪರಿಶೀಲಿಸಬೇಕಾಗುತ್ತದೆ ಎಂದು ಅದು ಹೇಳಿತ್ತು. ಸಂವಿಧಾನದ ಅಡಿಯಲ್ಲಿ ಯಾವುದೇ ಧರ್ಮ ಪಾಲಿಸುವ ಮತ್ತು ಪ್ರಚಾರ ಮಾಡಲು ಮೂಲಭೂತ ಹಕ್ಕು ಒದಗಿಸಲಾಗಿದೆ. ಆದರೆ ಮತಾಂತರದ ಮೂಲಭೂತ ಹಕ್ಕನ್ನು ಒಳಗೊಂಡಿಲ್ಲ ಎಂದು ಕೇಂದ್ರ ಸರ್ಕಾರ ಅಫಿಡವಿಟ್‌ ಸಲ್ಲಿಸಿತ್ತು. ಕಳೆದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಪ್ರಕರಣದಲ್ಲಿ ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರ ಸಲಹೆ ಕೋರಿತ್ತು.
(ಕೃಪೆ: ಬಾರ್&ಬೆಂಚ್)



Join Whatsapp