ತಿರುವನಂತಪುರಂ: ಕೇರಳದಲ್ಲಿ ಹಸಿ ಮೊಟ್ಟೆಯ ಮೇಯನೇಸ್ ಉತ್ಪಾದನೆ, ಸಂಗ್ರಹಣೆ ಮತ್ತು ಮಾರಾಟವನ್ನು ನಿಷೇಧಿಸಿ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ.
ಹಸಿ ಮೊಟ್ಟೆಗಳಿಂದ ತಯಾರಿಸುವ ‘ಮೇಯನೇಸ್’ ಅನ್ನು ಶೇಖರಿಸಿಟ್ಟು ಸೇವಿಸುವುದು ಜೀವಕ್ಕೆ ತುಂಬಾ ಅಪಾಯಕಾರಿ ಎಂಬ ಹಿನ್ನೆಲೆಯಲ್ಲಿ ಎಫ್ಎಸ್ಎಸ್ಎ ಕಾಯ್ದೆಯಡಿ ತುರ್ತಾಗಿ ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ.
ಹೋಟೆಲ್,ರೆಸ್ಟೊರೆಂಟ್,ಬೇಕರಿ,ಬೀದಿಬದಿ ವ್ಯಾಪಾರಿಗಳು ಮತ್ತು ಕ್ಯಾಟರಿಂಗ್ ವಲಯದ ಸಂಘಟನೆಗಳು ಹಸಿ ಮೊಟ್ಟೆಯಿಂದ ತಯಾರಿಸು ಮೇಯನೇಸ್ ನಿಷೇಧಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಇದರ ಬೆನ್ನಲ್ಲೇ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮೇಯನೇಸ್ ಅನ್ನು ತಕ್ಷಣವೇ ನಿಷೇಧಿಸಲಾಗಿದೆ ಎಂದು ಘೋಷಿಸಿದ್ದಾರೆ. ಮೇಯನೇಸ್ ಹೊಂದಿರುವ ವಿವಿಧ ಆಹಾರಗಳನ್ನು ಸೇವಿಸಿದ ಜನರು ಅಸ್ವಸ್ಥರಾಗಿರುವ ಬಗ್ಗೆ ಹಲವು ದೂರುಗಳು ದಾಖಲಾಗಿತ್ತು.
ಸ್ಯಾಂಡ್‌ವಿಚ್‌ಗಳು ಮತ್ತು ಷಾವರ್ಮಾಗಳಲ್ಲಿ ಮೇಯನೇಸ್ ಅನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಸರಿಯಾಗಿ ಪಾಶ್ಚರೀಕರಿಸದೆ ಮೇಯನೇಸ್ ತಯಾರಿಸಿ ಸಂಗ್ರಹಿಸಿದರೆ ಹಲವು ರೋಗಗಳನ್ನು ಉಂಟುಮಾಡುತ್ತದೆ. ಇದು ಆರೋಗ್ಯವಂತ ವ್ಯಕ್ತಿಯ ಮೇಲೂ ಪರಿಣಾಮ ಬೀರಬಹುದು. ಲ್ಯಾಬ್ ವರದಿಗಳಿಂದ ಇಂತಹ ಮೇಯನೇಸ್ ನಲ್ಲಿ ರೋಗಕಾರಕಗಳು ಕಂಡುಬಂದಿರುವ ಬಗ್ಗೆ ವರದಿಯಾಗಿವೆ.