ಬೆಂಗಳೂರು: ಚಿಕ್ಕಬಳ್ಳಾಪುರದ ಅವಲಗುರ್ಕಿ ಗ್ರಾಮದಲ್ಲಿ, ಸುಪ್ರಸಿದ್ಧ ನಂದಿ ಬೆಟ್ಟದ ಸಮೀಪ ಆದಿಯೋಗಿ ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಪಾಡುವಂತೆ ಇಶಾ ಯೋಗ ಕೇಂದ್ರಕ್ಕೆ ಬುಧವಾರ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
ಚಿಕ್ಕಬಳ್ಳಾಪುರದ ಚಂಬಳ್ಳಿಯ ಎಸ್ ಕ್ಯಾತಪ್ಪ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
2019ರ ಮಾರ್ಚ್ 6ರಂದು ರಾಜ್ಯ ಸರ್ಕಾರವು ಇಶಾ ಯೋಗ ಕೇಂದ್ರಕ್ಕೆ ಭೂಮಿ ಮಂಜೂರು ಮಾಡಿರುವ ಅಧಿಸೂಚನೆಯನ್ನು ಪ್ರಶ್ನಿಸಿ, ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಅರ್ಜಿದಾರರಿಗೆ ನ್ಯಾಯಾಲಯವು ಅನುಮತಿಸಿದೆ. ಒಂದು ವಾರದಲ್ಲಿ ಅರ್ಜಿ ತಿದ್ದುಪಡಿ ಮಾಡಿದ ಬಳಿಕ, ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಪೀಠವು ನೋಟಿಸ್ ಜಾರಿ ಮಾಡಿದೆ.
ನಂದಿ ಬೆಟ್ಟ ಮತ್ತು ನರಸಿಂಹ ದೇವರು ಬೆಟ್ಟದ ವ್ಯಾಪ್ತಿಯಲ್ಲಿ ಪರಿಸರ ಸಂಬಂಧಿ ಕಾನೂನುಗಳಿಗೆ ವಿರುದ್ಧವಾಗಿ ಪರಿಸರ ವ್ಯವಸ್ಥೆ, ಸ್ವಾಭಾವಿಕವಾಗಿ ಮಳೆ ನೀರು ಹರಿಯುವ ಪ್ರದೇಶ, ಜಲಮೂಲಗಳ ಚಹರೆ ಬದಲಿಸಲು ಮತ್ತು ಹಾನಿ ಉಂಟು ಮಾಡಲು ಇಶಾ ಯೋಗ ಕೇಂದ್ರಕ್ಕೆ ಸರ್ಕಾರದ ಪ್ರಾಧಿಕಾರಗಳು ಅವಕಾಶ ಮಾಡಿಕೊಟ್ಟಿವೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ಇದರಿಂದ ಇಲ್ಲಿನ ಜನ-ಜೀವನ ಮತ್ತು ಕಾಡು ಪ್ರಾಣಿಗಳ ಬದುಕಿನ ಮೇಲೆ ನೇರ ಪರಿಣಾಮ ಉಂಟಾಗಲಿದೆ ಎಂದು ವಿವರಿಸಲಾಗಿದೆ.
ಅವಲಗುರ್ಕಿಯ ಪ್ರಮುಖ ಪ್ರದೇಶ ಮತ್ತು ಹಸಿರು ವ್ಯಾಪ್ತಿ ಹೊಂದಿರುವ ಪ್ರದೇಶದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಅದನ್ನು ಇಶಾ ಯೋಗ ಕೇಂದ್ರ ಬಳಕೆ ಮಾಡುತ್ತಿದೆ. ಇದನ್ನು ನೋಡಿಕೊಂಡು ಸ್ಥಳೀಯ ಪ್ರಾಧಿಕಾರಿಗಳು ಸುಮ್ಮನಿರುವುದನ್ನು ನೋಡಿದರೆ ಇಶಾ ಯೋಗ ಕೇಂದ್ರ ಎಷ್ಟು ಪ್ರಭಾವಿಯಾಗಿದೆ ಎಂಬುದು ತಿಳಿಯುತ್ತದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಕಾನೂನಿಗೆ ವಿರುದ್ಧವಾಗಿ ಇಶಾ ಯೋಗ ಕೇಂದ್ರದ ಪರವಾಗಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರಗಳು ಆದೇಶ ಮಾಡಿವೆ. ಹೀಗಾಗಿ, ಅವಲಗುರ್ಕಿಯಲ್ಲಿ ಇಶಾ ಯೋಗ ಕೇಂದ್ರಕ್ಕೆ ಸಂಬಂಧಿಸಿದ ಭೂಮಿಗೆ ದಾಖಲೆ ಸಲ್ಲಿಸಲು ಆದೇಶಿಸಬೇಕು ಮತ್ತು ನಂದಿ ಬೆಟ್ಟದ ವ್ಯಾಪ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಪ್ರಕ್ರಿಯೆ ಆರಂಭಿಸಲು ನಿರ್ದೇಶನ ನೀಡಬೇಕು. ಪರಿಸರ ವ್ಯವಸ್ಥೆ, ಅವಲಗುರ್ಕಿ ಪ್ರದೇಶದ ಬೆಟ್ಟದ ಶ್ರೇಣಿಯಲ್ಲಿನ ಭೂಪ್ರದೇಶದ ಚಹರೆ ಬದಲಿಸದಂತೆ ಮತ್ತು ಹಾನಿ ಉಂಟು ಮಾಡದಂತೆ ಇಶಾ ಯೋಗ ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಅರ್ಜಿದಾರರ ಪರವಾಗಿ ವಕೀಲ ಎಂ ಶಿವಕುಮಾರ್ ಅವರು ವಾದಿಸಿದರು. ಸರ್ಕಾರದ ಪರವಾಗಿ ವಕೀಲೆ ಪ್ರತಿಮಾ ಹೊನ್ನಾಪುರ ಹಾಜರಿದ್ದರು.
(ಕೃಪೆ: ಬಾರ್&ಬೆಂಚ್)