ಭಾರತ್ ಜೋಡೋ: 114ನೇ ದಿನದ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಮಹಿಳೆಯರು

Prasthutha|

ಚಂಡೀಗಡ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು  ಹರಿಯಾಣದ ಕುರುಕ್ಷೇತ್ರದ ಬಳಿಯಿಂದ ಸೋಮವಾರ ಹೊರಟಿದ್ದು, ಈ ದಿನ ಯಾತ್ರೆಯಲ್ಲಿ ಭಾಗವಹಿಸಿದವರೆಲ್ಲ ಮಹಿಳೆಯರೇ ಆಗಿರುವುದು ಇಂದಿನ ವಿಶೇಷತೆಯಾಗಿದೆ.

- Advertisement -

ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ ಇದನ್ನು ಸಂಘಟಿಸಲಾಗಿದೆ ಎಂದು ಕಾಂಗ್ರೆಸ್ ಸಂಸದೆ ಜೋತಿಮಣಿ  ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಮಾಧ್ಯಮ ಕೋಶದ ಮುಖ್ಯಸ್ಥ ಜೈರಾಂ ರಮೇಶ್ ಟ್ವೀಟ್ ಮಾಡಿ, ರಾಜಸ್ತಾನದ ಸವಾಯ್ ಮಾಧೋಪುರ ಜಿಲ್ಲೆಯಲ್ಲಿ ಪೀಪಲ್ ವಾಡಾ ಬಳಿ ಡಿಸೆಂಬರ್’ನಲ್ಲಿ ಮಹಿಳಾ ಸಶಕ್ತೀಕರಣ ದಿನ ಆಚರಿಸಲಾಗಿತ್ತು. ಅಂದಿನ ನಡಿಗೆಯಲ್ಲಿ ಕೂಡ ಬಹುತೇಕ ಮಹಿಳೆಯರೇ ಇದ್ದರು ಎಂದು ಸ್ಮರಿಸಿದ್ದಾರೆ.

- Advertisement -

ಅದೇ ರೀತಿ ನವೆಂಬರ್ 19ರಂದು ಇಂದಿರಾ ಗಾಂಧಿಯವರ ಜನ್ಮ ದಿನದಂದು ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರ ಜೊತೆಗೆ ಮಹಿಳೆಯರು ಮಾತ್ರ ಹೆಜ್ಜೆ ಹಾಕಿದ್ದರು ಎಂದು ಸಹ ತಿಳಿಸಿದ್ದಾರೆ.

ಭಾನುವಾರ ಮತ್ತೆ ಯಾತ್ರೆ ಹರಿಯಾಣ ಪ್ರವೇಶಿಸಿದಾಗ ನಡೆದ ಸಭೆಯಲ್ಲಿ ಕೇಂದ್ರದ ಮೋದಿ ಸರಕಾರವನ್ನು ತೀವ್ರವಾಗಿ ಟೀಕಿಸಿದ ರಾಹುಲ್ ಗಾಂಧಿ, “ರೈತರ ಆದಾಯ ಹೆಚ್ಚಾಗಲಿಲ್ಲ. ಸರಿಯಾದ ಬೆಲೆ ಸಿಗದೆ, ರಸಗೊಬ್ಬರದ ಕೊರತೆ ಇತ್ಯಾದಿ ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದಾರೆ. ಹರಿಯಾಣದಲ್ಲಿ ಇನ್ನೇನು ಕಾಂಗ್ರೆಸ್ ಸರಕಾರ ಬರಲಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಸರಕಾರವೆಂದರೆ ಅದು ರೈತರ ಸರಕಾರ”ಎಂದು ರಾಹುಲ್ ಹೇಳಿದರು.

ದೇಶದ ನಿಜವಾದ ಧ್ವನಿಯನ್ನು ಆಲಿಸುವುದು ಭಾರತ್ ಜೋಡೋ ಯಾತ್ರೆಯ ಮುಖ್ಯ ಉದ್ದೇಶ. ದೇಶದ ಹಣಕಾಸು ಹಿಡಿತವು ಮೂರ್ನಾಲ್ಕು ಕುಟುಂಬದವರ ಪಾಲಾಗುತ್ತಿದೆ. ದೇಶವನ್ನು ಹಣದುಬ್ಬರ ಆಳುತ್ತಿದೆ. ಮೋದಿ ಸರಕಾರದಡಿ ಮತ್ತು ಬಿಜೆಪಿ ಸರಕಾರಗಳು ಇರುವಲ್ಲಿ ಅಸಮಾನತೆ ಬೆಳೆಯುತ್ತಿದೆ. ಮೋದಿಯವರನ್ನು ಪೂಜಿಸಬೇಕು ಎಂದು ಸಂಘ ಪರಿವಾರದ ಹಲವರು ಪ್ರಚಾರ ಮಾಡುತ್ತಿದ್ದಾರೆ. ಇದೆಲ್ಲ ದ್ವೇಷ ಹಂಚುವ ಹುನ್ನಾರವಷ್ಟೇ ಎಂದು ಟೀಕಿಸಿದರು.

114ನೇ ದಿನದ ಯಾತ್ರೆಯಲ್ಲಿ ಹರಿಯಾಣದ ನಾಯಕರಾದ ಸೆಲ್ಜಾ ಕುಮಾರಿ, ದೀಪೇಂದರ್ ಸಿಂಗ್ ಹೂಡಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಈ ವೇಳೆ ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆಯು ಮೊಹಬ್ಬತ್ ಕ ದುಖಾನ್ (ಪ್ರೀತಿಯ ಅಂಗಡಿ) ಎಂದು ಹೇಳಿದರು.



Join Whatsapp