ಗಡಿ ಸಮಸ್ಯೆಗಳಿಗೆ ಮೂಲ ಕಾರಣ ಸರ್ದಾರ್ ವಲ್ಲಭಬಾಯಿ ಪಟೇಲ್ ಎಂದ ಡಾ. ದೊಡ್ಡರಂಗೇಗೌಡ

Prasthutha|

ಹಾವೇರಿ: ಭಾಷಾವಾರು ಪ್ರಾಂತ ವಿಂಗಡಣೆಯೆಂದು ಭೂಪಟವನ್ನು ಇಟ್ಟುಕೊಂಡು ಅವೈಜ್ಞಾನಿಕವಾಗಿ ಗೆರೆಗಳನ್ನು ಎಳೆದ ಸರ್ದಾರ್ ವಲ್ಲಭಬಾಯಿ ಪಟೇಲರೇ ಗಡಿ ಸಮಸ್ಯೆಗಳಿಗೆ ಮೂಲ ಕಾರಣ ಎಂದು 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ದೊಡ್ಡರಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -


‘ಗಡಿನಾಡು ಮತ್ತು ಹೊರನಾಡು ಕನ್ನಡಿಗರ ತಳಮಳಗಳು’ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು. ‘ಗಡಿ ಪ್ರದೇಶದಲ್ಲಿರುವ ಕೆಲವು ಹಳ್ಳಿಗಳು ಮೂರು ರಾಜ್ಯ ಸರ್ಕಾರಗಳ ಆಡಳಿತಕ್ಕೆ ಒಳಪಟ್ಟಿವೆ. ಭಾಷಾವಾರು ಪ್ರಾಂತ ವಿಂಗಡಣೆ ಇತ್ತೀಚೆಗೆ ಹೊಸ ಹೊಸ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದ್ದು, ಜನರ ಸಂಸ್ಕೃತಿಗೆ ಮತ್ತು ಭಾಷೆಗೆ ಅನುಗುಣವಾಗಿ ವರ್ಗೀಕರಣವಾಗದ ಕಾರಣ ಭಾಷಾವಾರು ಪ್ರಾಂತ ವಿಂಗಡಣೆ ಪುನರ್ ಹೊಂದಾಣಿಕೆ ಮಾಡಬೇಕು ಎಂಬುವುದನ್ನು ಇದು ಸೂಚಿಸುತ್ತದೆ ಎಂದು ಹೇಳಿದರು.


ಕಾಸರಗೋಡು ಮತ್ತು ಬೆಳಗಾವಿಯ ಗಡಿ ಸಮಸ್ಯೆ ಸದಾ ಕಾಡುತ್ತಿದ್ದು, ಸೊಲ್ಲಾಪುರ, ಅಕ್ಕಲಕೋಟೆ, ಜತ್ ಪ್ರದೇಶಗಳಲ್ಲಿ ಶೇಕಡ 90ರಷ್ಟು ಕನ್ನಡ ಭಾಷಿಗರು ನೆಲೆಸಿದ್ದಾರೆ. ಕೇರಳದಲ್ಲಿ ಸಾಕಷ್ಟು ಮಂದಿ ಪ್ರತಿಭಾವಂತ ಕನ್ನಡಿಗರಿದ್ದಾರೆ. ಕನ್ನಡ ಶಾಲೆ ಇಲ್ಲದ ಕಾರಣ ಕನ್ನಡ ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ. ಕನ್ನಡ ಶಾಲೆಗಳನ್ನು ತೆರೆಯಲು ಅಲ್ಲಿಯ ಸರ್ಕಾರ ಕಠೋರವಾಗಿ ವರ್ತಿಸುತ್ತಿದೆ ಎಂದು ಹೇಳಿದರು.
ಚೆನ್ನೈ, ಮುಂಬೈ ನಗರಗಳಲ್ಲಿ ಕನ್ನಡ ಸಂಘಟನೆಗಳು, ಕೆಲವು ಪತ್ರಿಕೆಗಳು ಸರಾಗವಾಗಿ ಕಾರ್ಯ ನಿರ್ವಹಿಸುತ್ತಿವೆ. ಹೊರ ರಾಜ್ಯದಲ್ಲಿ ಕನ್ನಡ ಕಟ್ಟುವ ಕೆಲಸ ಸಾಧ್ಯವಾಗುತ್ತದೆ ಎಂದಾದರೆ, ನಮ್ಮ ನಾಡಲ್ಲಿ ಯಾಕಾಗುತ್ತಿಲ್ಲ ಎಂದು ಪ್ರಶ್ನಿಸಿದರು.

- Advertisement -


ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಿಗಬೇಕಾದ ಅನುದಾನ ಸಿಗುತ್ತಿಲ್ಲ. ಸರ್ಕಾರದಿಂದ ಅನುದಾನ ದೊರೆಯುತ್ತವೆಯಾದರೂ, ಹಣಕಾಸಿನ ಇಲಾಖೆ ಕೊಕ್ಕೆ ಹಾಕುತ್ತದೆ. ಆದ್ದರಿಂದ ಕೆಲವೊಂದು ಸಮಸ್ಯೆಗಳು ಬಗೆಹರಿಯದೇ ಹಾಗೆಯೇ ಉಳಿದಿವೆ’ ಎಂದು ಸರ್ಕಾರದ ನಡೆಯನ್ನು ಟೀಕಿಸಿದರು.



Join Whatsapp