ಜ.10 ರಂದು ನ್ಯಾ. ಸದಾಶಿವ ಆಯೋಗದ ವರದಿ ತಿರಸ್ಕರಿಸುವಂತೆ ಬೃಹತ್ ಹೋರಾಟ: ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಎಚ್ಚರಿಕೆ

Prasthutha|

ಬೆಂಗಳೂರು: ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರದ ಮೊದಲ ಪರಿಶಿಷ್ಟ ಜಾತಿ ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಲೆಮಾರಿ ಕೊರಮ ಕೊರಚ ಜಾತಿಗಳ ಮೀಸಲಾತಿ ರಕ್ಷಣೆಗೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಮಾರಕವಾಗಿದ್ದು, ಅವಾಸ್ತವಿಕ, ಅವೈಜ್ಞಾನಿಕ, ಅಂವಿಧಾನಿಕ ವರದಿಯನ್ನೇ ತಿರಸ್ಕರಿಸುವಂತೆ ಭಾರೀ ಕೂಗು ಕೇಳಿ ಬಂದಿದೆ.

- Advertisement -

ರಾಜ್ಯದಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಕೊರಮ-ಕೊರಚ-ಕೊರವ ಸಮುದಾಯಗಳ ಜನ ನಾಡಿದ್ದು ಜ.10 ರಂದು ಬೆಂಗಳೂರಿನ ಕೆ.ಆರ್.ಎಸ್ ನಿಲ್ಧಾಣದಿಂದ ಬೃಹತ್ ಜಾತಾ ಮೂಲಕ ಫ್ರೀಡಂ ಪಾರ್ಕ್ ನಲ್ಲಿ ಸೇರಿ ಬೃಹತ್ ಹೋರಾಟದ ಮೂಲಕ ಆಯೋಗದ ವರದಿಯನ್ನು ತಿರಸ್ಕರಿಸುವಂತೆ ಆಗ್ರಹಿಸಲಿದ್ದಾರೆ.

“ಅಖಿಲ ಕರ್ನಾಟಕ ಕುಳುವ ಮಹಾಸಂಘ” (ಕೊರಮ- ಕೊರಚ- ಕೊರವ ಸಮುದಾಯಗಳ ಒಕ್ಕೂಟ) ದ ರಾಜ್ಯಾಧ್ಯಕ್ಷ ಶಿವಾನಂದ ಎಂ ಭಜಂತ್ರಿ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು  ಕೊರಮ, ಕೊರಚ ಹಾಗೂ ಬೋವಿ ಮತ್ತು ಲಂಬಾಣಿ ಸಮುದಾಯಗಳು ಸ್ವಾತಂತ್ರ್ಯ ಪೂರ್ವದ ಮಿಲ್ಲರ್ ಆಯೋಗದ ವರದಿ, ಡಾ.ಬಿ.ಆರ್.ಅಂಬೇಡ್ಕರ್ ಸಿದ್ದಪಡಿಸಿದ ಪ್ರಥಮ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಮತ್ತು 1950 ರಲ್ಲಿ ಮೈಸೂರು ಆಡಳಿತದಲ್ಲಿ ಗುರುತಿಸಿ, ಆದಿದ್ರಾವಿಡ, ಆದಿ ಕರ್ನಾಟಕ, ಬಂಜಾರ ಅಥವಾ ಲಂಬಾಣಿ, ಭೋವಿ, ಕೊರಚ, ಕೊರಮ ಜಾತಿಗಳು ಪರಿಶಿಷ್ಟ ಜಾತಿಗೆ ಸೇರಿವೆ ಎಂದರು.

- Advertisement -

ಆದರೆ ಇತ್ತೀಚಿಗೆ ಸಾಮಾಜಿಕ, ಶೈಕ್ಷಣಿಕವಾಗಿ ಇನ್ನೂ ಕನಿಷ್ಟ ಅಭಿವೃದ್ದಿ ಹೊಂದದ ಈ ಅವಕಾಶವಂಚಿತರನ್ನು ಸ್ಪೃಶ್ಯರು ಮತ್ತು ಅಸ್ಪೃಶ್ಯರು ಎಂದು ಹೊಸ ವರ್ಗ ಸೃಷ್ಟಿ ಮಾಡಿ ಪರಿಶಿಷ್ಟರ ಪಟ್ಟಿಯಿಂದ ಹೊರಗಿಡಲು ಶಿಫಾರಸ್ಸು ಮಾಡುವ ಮೂಲಕ ನ್ಯಾ.ಸದಾಶಿವ ಆಯೋಗದ ವರದಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟವಾಗಿದೆ. ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ಅವಕಾಶ ನೀಡದೇ ಬಿಜೆಪಿ ಸರ್ಕಾರ ಏಕಪಕ್ಷೀಯವಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಪ್ರಯತ್ನದಲ್ಲಿ ತೊಡಗಿರುವುದು ಸರಿಯಲ್ಲ. ಪರಿಶಿಷ್ಟರಲ್ಲಿ ಒಳಮೀಸಲಿಗೆ ಕೇಂದ್ರ, ರಾಜ್ಯ ಸರ್ಕಾರ ಅಥವಾ ನ್ಯಾಯಾಲಯಕ್ಕಾಗಲೀ ಅವಕಾಶ ಇಲ್ಲ. ಆದರೇ ಈ ಕುರಿತು ರಾಜ್ಯ ಸರ್ಕಾರ ಸಚಿವ ಸಂಪುಟದ ಉಪಸಮಿತಿ ರಚಿಸಿದ್ದು, ಶೀಘ್ರ ಆಯೋಗದ ವರದಿ ಜಾರಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವುದು ಕಾನೂನು ಸಚಿವರು ಹೇಳಿದ್ದು, ಇದನ್ನು ವಿರೋಧಿಸಿ ಬೃಹತ್ ಹೋರಾಟ ನಡೆಸುತ್ತಿರುವುದಾಗಿ ಹೇಳಿದರು. 

ಸಂವಿಧಾನಕ್ಕೆ ತಿದ್ದುಪಡಿ ಮಾಡದೇ ವರದಿ ಜಾರಿಗೊಳಿಸಲು ಸಾಧ್ಯವಿಲ್ಲ. ಪರಿಶಿಷ್ಟರಲ್ಲಿ ಒಳವರ್ಗೀಕರಣ ಮಾಡುವಂತೆ ಶಿಫಾರಸ್ಸು ಮಾಡಿರುವುದು ಬಾಬಾ ಸಾಹೇಬರು ನೀಡಿರುವ ಮೀಸಲಾತಿಯ ಪರಿಕಲ್ಪನೆಗೆ ಧಕ್ಕೆ ಮಾಡಿದಂತಾಗುತ್ತದೆ. ಈ ಸಮುದಾಯಗಳು ನಾನಾ ಕಾರಣಕ್ಕೆ ದೇಶದ ಉದ್ದಗಲಕ್ಕೂ ಚದುರಿ ಹೋಗಿವೆ. ಅವಮಾನ, ಅಸಮಾನತೆ, ತಾರತಮ್ಯ ಹಾಗೂ ಸಾಮಾಜಿಕ ಕಳಂಕಕ್ಕೆ ಗುರಿಯಾಗಿ ಮುಖ್ಯವಾಹಿನಿಗೆ ಬರಲಾಗದೇ ಅಲೆಮಾರಿ ಜಾತಿಗಳಾಗಿಯೇ ಉಳಿದಿವೆ. ಇಂತಹ ಪರಿಸ್ಥಿತಿಯಲ್ಲಿ ಒಂದು ವರ್ಗವನ್ನು ಓಲೈಕೆ ಮಾಡಲು ಮೀಸಲಾತಿಯ ಕನಿಷ್ಟ ಸವಲತ್ತು ಪಡೆಯದ ಈ ಪರಿಶಿಷ್ಟ ಜಾತಿ ಅಲೆಮಾರಿ ಸಮುದಾಯಗಳ ಅಭಿವೃದ್ದಿಗೆ ಮಾರಕವಾಗಿರುವ ವರದಿಯನ್ನು ಸರ್ಕಾರ ತಿರಸ್ಕಾರ ಮಾಡದೇ ಇದ್ದಲ್ಲಿ ಇಡೀ ದೇಶಾದ್ಯಾಂತ ಅನ್ಯಾಯಕ್ಕೊಳಗಾಗುವ ಸಮುದಾಯಗಳನ್ನು ಒಂದೇ ವೇದಿಕೆಗೆ ತಂದು ರಾಷ್ಟ್ರವ್ಯಾಪಿ  ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.



Join Whatsapp