ಬೆಂಗಳೂರು: ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣವನ್ನು ಅನುಷ್ಠಾನಗೊಳಿಸುವ ಉದ್ದೇಶದೊಂದಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಸೋಮವಾರ (ಜ.9) ದುಂಡು ಮೇಜಿನ ಸಮಾಲೋಚನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ವಿಧಾನಸೌಧದ 3ನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ನಡೆಯುವ ಸಮಾಲೋಚನಾ ಸಭೆಯಲ್ಲಿ ಸಚಿವರು, ಶಿಕ್ಷಣ ತಜ್ಞರು, ವಿವಿಧ ಧಾರ್ಮಿಕ ಗುರುಗಳು, ಚಿಂತಕರು, ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ.
‘ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣವನ್ನು ಅಳವಡಿಸುವ ಕುರಿತು ಅಭಿಪ್ರಾಯ/ಸಲಹೆಗಳನ್ನು ಸಂಗ್ರಹಿಸಲು ಈ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ವ್ಯಕ್ತವಾಗುವ ಅಂಶಗಳ ಆಧಾರದ ಮೇಲೆ ಇಲಾಖಾ ಹಂತದಲ್ಲಿ ಆಯೋಜಿಸುವ ಸಭೆಗಳಲ್ಲಿ ಚರ್ಚಿಸಿ ‘ಮೌಲ್ಯ ಶಿಕ್ಷಣ’ದ ಅನುಷ್ಠಾನದ ವಿಧಾನಗಳನ್ನು ಅಂತಿಮಗೊಳಿಸಲಾಗುತ್ತದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.