ಬಿಟಿಎಂ ಬಡಾವಣೆಯಲ್ಲಿ ಬೃಹತ್ ಉದ್ಯೋಗ ಮೇಳ

Prasthutha|

ಬೆಂಗಳೂರು: ನಿರುದ್ಯೋಗಿಗಳಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವ ಉದ್ದೇಶದಿಂದ ಬಿಟಿಎಂ ಬಡಾವಣೆಯ ವೇಮನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆವರಣದಲ್ಲಿ ನೆಕ್ಸ್ ಪ್ಲೇಸ್ ಇನ್ ಫೋ ಪ್ರೈವೇಟ್ ಲಿ. ನಿಂದ ಬೆಂಗಳೂರಿನ ಅತಿಡೊಡ್ಡ ಉದ್ಯೋಗ ಮೇಳ ಆಯೋಜಿಸಿದ್ದು, ಐದು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ.

- Advertisement -


ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದರು. ಮೇಳದಲ್ಲಿ ಸುಮಾರು 30 ಸಾವಿರ ಮಂದಿ ಪಾಲ್ಗೊಂಡಿದ್ದರು.
ರಾಮಲಿಂಗಾರೆಡ್ಡಿ ಮಾತನಾಡಿ, ಬಿ.ಟಿ.ಎಂ.ವಿಧಾನಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಉದ್ಯೋಗ ಮೇಳ ಆಯೋಜಿಸುತ್ತಿದ್ದು, ಪ್ರತಿವರ್ಷ ಸಹಸ್ರಾರು ಮಂದಿಗೆ ಉದ್ಯೋಗ ಕಲ್ಪಿಸಲಾಗುತ್ತಿದೆ. ಈ ಬಾರಿ 125ಕ್ಕೂ ಹೆಚ್ಚು ಪ್ರಖ್ಯಾತ ಕಂಪನಿಗಳು ಭಾಗವಹಿಸಿದ್ದವು. ಮೇಳದಲ್ಲಿ ಭಾಗವಹಿಸಿದ್ದ ಮತ್ತಷ್ಟು ಜನರಿಗೆ ಉದ್ಯೋಗ ದೊರೆಯಲಿದೆ ಎಂದರು.


ಕಾಂಗ್ರೆಸ್ ಆಡಳಿತದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ, ಯುವ ಸಮೂಹಕ್ಕೆ ಉದ್ಯೋಗ ಕಲ್ಪಿಸಲಾಗಿತ್ತು. ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ನೀಡಿದ ಪ್ರೋತ್ಸಾಹ, ಸಹಕಾರದಿಂದ ವಿಶ್ವದಲ್ಲಿ ನಮ್ಮ ನಗರ ಮಾಹಿತಿ ತಂತ್ರಜ್ಞಾನ ತಾಣವಾಗಿ ಖ್ಯಾತಿ ಗಳಿಸಿದೆ, ಲಕ್ಷಾಂತರ ಜನರಿಗೆ ಉದ್ಯೋಗ ದೊರೆತಿದ್ದು, ದೇಶದ ಜಿಡಿಪಿಗೆ ಮಹತ್ವದ ಕೊಡುಗೆ ನೀಡಲು ಸಾಧ್ಯವಾಗಿದೆ. ಇದೆಲ್ಲವೂ ಕಾಂಗ್ರೆಸ್ ನ ದೂರ ದೃಷ್ಟಿಯಿಂದ ಸಾಧ್ಯವಾಗಿದೆ. ರೋಜ್ ಗಾರ್ ಯೋಜನೆ ಮೂಲಕ ಕೊಟ್ಯಂತರ ನಿರುದ್ಯೋಗಿ ಯುವಜನರಿಗೆ ಸುಲಭವಾಗಿ ಸಾಲ ಸೌಲಭ್ಯ ನೀಡಿದ್ದು, ಇದರಿಂದ ಸ್ವಾವಲಂಬಿ ಜೀವನ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

- Advertisement -


ಕಾಂಗ್ರೆಸ್ ಮುಖಂಡ ರಾಮೋಜಿ ಗೌಡ ನೇತೃತ್ವದಲ್ಲಿ ಉದ್ಯೋಗ ಮೇಳ ಏರ್ಪಡಿಸಲಾಗಿತ್ತು. ಮಾಜಿ ಮೇಯರ್ ಮಂಜುನಾಥ ರೆಡ್ಡಿ, ಪಾಲಿಕೆ ಮಾಜಿ ಸದಸ್ಯರಾದ, ನಾಗರಾಜ್, ಬಿ. ಮೋಹನ್, ಮಂಜುನಾಥ, ಆಶಿತಾಗೌಡ ಮತ್ತಿತರರು ಪಾಲ್ಗೊಂಡಿದ್ದರು.



Join Whatsapp