ವಿಜಯಪುರ: ಹೊಸ ಸ್ವರೂಪದ ಮೀಸಲಾತಿಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಹೊಸ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದ್ದು, ಪಂಚಮಸಾಲಿ, ಒಕ್ಕಲಿಗ ಮಾತ್ರವಲ್ಲದೇ ಇತರೆ ಸಮುದಾಯಗಳಿಗೂ ಮೂರು ತಿಂಗಳಲ್ಲಿ ಕಾನೂನು ತೊಡಕಾಗದಂತೆ ಮೀಸಲು ಸೌಲಭ್ಯ ದೊರಕಲಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಭರವಸೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಆರ್ಥಿಕ ಹಿಂದುಳಿದ ವರ್ಗಕ್ಕೆ ಶೇ.10 ಘೋಷಿಸಿದೆ. ಮತ್ತೊಂದೆಡೆ ಕೆಲವು ಸಮುದಾಯಗಳು ಎರಡು-ಮೂರು ಕಡೆಗಳಲ್ಲಿ ಮೀಸಲು ಪಡೆಯುತ್ತಿವೆ. ಇಂತ ಸಮುದಾಯಗಳನ್ನು ಒಂದು ಕಡೆ ಮಾತ್ರ ಮೀಸಲು ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಇದರಿಂದ ಉಳಿಕೆಯಾಗುವ ಶೇ.4-5 ಪ್ರಮಾಣವನ್ನು ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗರಿಗೆ ಮೀಸಲು ಹೆಚ್ಚಿಸಲು ಯೋಚಿಸಿಯೇ 2ಸಿ, 2ಡಿ ಯೋಜಿಸಿದ್ದೇವೆ ಎಂದು ವಿವರಿಸಿದರು.
ಪಂಚಮಸಾಲಿ ಸಮುದಾಯದ ಹೋರಾಟದ ವೇದಿಕೆಯಲ್ಲಿ ಬಣಜಿಗ ಸಮಾಜದ ಬಗ್ಗೆ ಸಭೆ ಹಗುರವಾಗಿ ಮಾತನಾಡುವ ನೀವು, ನಿಮ್ಮ ಮಾತುಗಳಿಂದ ಸೌಹಾರ್ದದ ಸಮಾಜಲ್ಲಿ ಕಂದಕ ನಿರ್ಮಾಣ ಆಗುತ್ತಿದೆ. ಸಭೆಯಲ್ಲಿ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಆಡುವ ನಿಮ್ಮ ಮಾತುಗಳಿಗೆ ಚುನಾವಣೆಯಲ್ಲಿ ಸೂಕ್ತ ಉತ್ತರ ಸಿಗಲಿದೆ ಎಂದು ಪರೋಕ್ಷವಾಗಿ ಯತ್ನಾಳ ಹಾಗೂ ವಿಜಯಾನಂದ ಕಾಶಪ್ಪನವರ ಅವರಿಗೆ ಎಚ್ಚರಿಕೆ ನೀಡಿದರು.
2011 ಜನಗಣತಿ ಆಧಾರದಲ್ಲಿ ಮೂರು ತಿಂಗಳಲ್ಲಿ ಈಗಿರುವ ಮೀಸಲಾತಿಯಲ್ಲಿನ ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ 2ಸಿ, 2ಡಿ ಮೀಸಲು ಕಲ್ಲಿಸಲಾಗುತ್ತದೆ. ಚುನಾವಣೆ ಪೂರ್ವದಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಿರಾಣಿ ಹೇಳಿದರು.