ಕಾಂಗ್ರೆಸ್‌ನಿಂದ ಕೆಜಿಎಫ್ ಬಾಬು ಅಮಾನತು

Prasthutha|

►ಕೆಪಿಸಿಸಿ ಕಚೇರಿಯಲ್ಲೇ ಸುದ್ದಿಗೋಷ್ಠಿ ನಡೆಸಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದ ಯೂಸುಫ್ ಶರೀಫ್

- Advertisement -

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲೇ ಸುದ್ದಿಗೋಷ್ಠಿ ನಡೆಸಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದ ‘ಕೆಜಿಎಫ್ ಬಾಬು’ ಖ್ಯಾತಿಯ ಯೂಸುಫ್ ಶರೀಫ್ ಅವರನ್ನು ಕಾಂಗ್ರೆಸ್ ಅಮಾನತು ಮಾಡಿದೆ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಕೆಜಿಎಫ್ ಬಾಬು ಅವರಿಗೆ ಕಾಂಗ್ರೆಸ್ ಶಿಸ್ತು ಸಮಿತಿಯ ಅಧ್ಯಕ್ಷ ರೆಹಮಾನ್ ಖಾನ್ ಅಮಾನತು ಆದೇಶವನ್ನು ಕಳುಹಿಸಿದ್ದಾರೆ.

- Advertisement -

“ನಾನು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಆರು ತಿಂಗಳಿನಿಂದ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಮನೆ ಮನೆಗೂ 5000 ಸಾವಿರ ಕೊಟ್ಟಿದ್ದೇನೆ. ಇದುವರೆಗೂ ಅಧಿಕೃತವಾಗಿ ₹30 ಕೋಟಿ ಹಣ ಖರ್ಚು ಮಾಡಿದ್ದೇನೆ. ಇದನ್ನ ಯಾರೂ ಧೈರ್ಯವಾಗಿ ಹೇಳಲ್ಲ. ಆದರೆ ನಾನು ಹೇಳುತ್ತಿದ್ದೇನೆ. ಆದರೆ ಇಲ್ಲಿ ಸೀನಿಯಾರಿಟಿ ನೋಡುತ್ತಿದ್ದಾರೆ. ಸಿನಿಯಾರಿಟಿ ನೋಡಿದರೆ, ಮುಂದಿನ ಚುನಾವಣೆಯಲ್ಲಿ 80 ಸ್ಥಾನ ಗೆಲ್ಲುವುದಿಲ್ಲ. ನಾವು ಅತಿಯಾದ ಆತ್ಮವಿಶ್ವಾಸದಿಂದ ಇದ್ದೇವೆ. ಆದ್ದರಿಂದ ಎಚ್ಚರಿಕೆ ವಹಿಸಬೇಕು. ಕೆಪಿಸಿಸಿಯಲ್ಲಿರುವವರು ಇಲ್ಲಿಗೆ ಬರುವವರಿಗೆ ಗೌರವ ಕೊಡಬೇಕು. ಇಲ್ಲ ಎಂದರೇ ಕಷ್ಟ ಆಗುತ್ತದೆ” ಎಂದು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುವ ಸಂದರ್ಭದಲ್ಲಿ ಕೆಜಿಎಫ್‌ ಬಾಬು ವಾಗ್ದಾಳಿ ನಡೆಸಿದ್ದರು. ಈ ವೇಳೆ ಅಲ್ಲಿದ್ದ ಕಾರ್ಯಕರ್ತರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಮಾತಿನ ಚಕಮಕಿಯೂ ನಡೆದದ್ದರಿಂದ ಪತ್ರಿಕಾಗೋಷ್ಠಿಯನ್ನು ಅರ್ಧದಲ್ಲೇ ನಿಲ್ಲಿಸಿ, ಕೆಜಿಎಫ್ ಬಾಬು ಸ್ಥಳದಿಂದ ತೆರಳಿದ್ದರು.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಶಿಸ್ತುಪಾಲನಾ ಸಮಿತಿ, ಅಮಾನತು ಮಾಡಿ ಆದೇಶಿಸಿದೆ.

“ತಾವು ಪಕ್ಷದ ನೀತಿಗೆ ವಿರುದ್ಧವಾಗಿ ಮಾಧ್ಯಮದವರ ಬಳಿ ವಿವಿಧ ರೀತಿಯ ಹೇಳಿಕೆ ನೀಡುವ ಬಗ್ಗೆ ಕಾಂಗ್ರೆಸ್ ಪಕ್ಷದ ಶಿಸ್ತುಪಾಲನಾ ಸಮಿತಿಯಿಂದ ತಮಗೆ ಈಗಾಗಲೇ ಕಾರಣ ಕೇಳಿ, ಮೂರು ತಿಂಗಳ ಹಿ೦ದೆಯೇ ನೋಟಿಸ್‌ ನೀಡಿತ್ತು. ಈ ನೋಟಿಸ್‌ಗೆ ನೀವು ಸಮಂಜಸ ಉತ್ತರವನ್ನು ನೀಡಿಲ್ಲ. ಶುಕ್ರವಾರ ಸಹ ಸ್ವಯಂಪ್ರೇರಿತರಾಗಿ ನೀವು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಅಧ್ಯಕ್ಷರ ಪೂರ್ವಾನುಮತಿ ಇಲ್ಲದೆ, ಪಕ್ಷವನ್ನು ಉದ್ದೇಶಿಸಿ ವಿವಿಧ ಹೇಳಿಕೆಯನ್ನು ಮಾಧ್ಯಮಕ್ಕೆ ನೀಡಿರುವಿರಿ. ನಿಮ್ಮ ಈ ನಡೆಯೂ ಪಕ್ಷಕ್ಕೆ ಹಾನಿಯುಂಟು ಮಾಡುತ್ತಿದೆ ಹಾಗೂ ಪಕ್ಷದ ಹಿನ್ನಡೆಗೆ ಕಾರಣವಾಗುತ್ತಿದೆ ಎಂದು ಗಂಭೀರವಾಗಿ ಪರಿಗಣಿಸಿ, ಈ ಕೂಡಲೇ ನಿಮ್ಮನ್ನು ಪಕ್ಷದಿಂದ ಅಮಾನುತು ಗೊಳಿಸಲಾಗಿದೆ” ಎಂದು ಕೆಜಿಎಫ್ ಬಾಬು ಅವರಿಗೆ ಕಾಂಗ್ರೆಸ್ ಶಿಸ್ತು ಸಮಿತಿಯ ಅಧ್ಯಕ್ಷ ರೆಹಮಾನ್ ಖಾನ್ ಅಮಾನತು ಆದೇಶವನ್ನು ಕಳುಹಿಸಿದ್ದಾರೆ.



Join Whatsapp