ಬೆಂಗಳೂರು: ದೇಶದ ಎರಡನೇ ಮಹತ್ವಾಕಾಂಕ್ಷೆ ಮಿಷನ್, ಚಂದ್ರಯಾನ-2 ರ ಮೊದಲ ಹಂತದ ದತ್ತಾಂಶವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಬಿಡುಗಡೆಗೊಳಿಸಿದೆ. ಬೆಂಗಳೂರು ಸಮೀಪದಲ್ಲಿರುವ ಇಂಡಿಯನ್ ಸ್ಪೇಸ್ ಸೈನ್ಸ್ ಡೇಟಾ ಸೆಂಟರ್(ಐ.ಎಸ್.ಎಸ್.ಡಿ.ಸಿ) ನಲ್ಲಿ ಚಂದ್ರಯಾನ-2 ಮಿಷನ್ ದತ್ತಾಂಶ ಸಂಗ್ರಹಿಸಲಾಗಿದೆ.
2019ರ ಜುಲೈ 22ರಂದು ಚಂದ್ರಯಾನ-2 ಬಾಹ್ಯಾಕಾಶ ನೌಕಾಯಾನ ಆರಂಭವಾಗಿತ್ತು. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಸ್ ಧವನ್ ಬಾಹ್ಯಾಕಾಶಕ ಕೇಂದ್ರದಿಂದ ಆರ್ಬಿಟರ್, ವಿಕ್ರಂ ಲ್ಯಾಂಡರ್ ಹಾಗೂ ಪ್ರಜ್ಞಾರ್ ರೋವರನ್ನೊಳಗೊಂಡ ‘ಚಂದ್ರಯಾನ-2’ ಉಪಕರಣಗಳನ್ನು ಹೊತ್ತ ಜಿ.ಎಸ್.ಎಸ್.ವಿ ಮಾರ್ಕ್ 3 ರಾಕೆಟ್ ಉಡಾವಣೆಗೊಂಡಿತ್ತು.
ಆದರೆ, ಸೆಪ್ಟೆಂಬರ್ ನಲ್ಲಿ ಚಂದ್ರನಲ್ಲಿ ವಿಕ್ರಂ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡುವ ಪ್ರಯತ್ನ ವಿಫಲಗೊಂಡಿತ್ತು. ಆದರೆ 8 ವೈಜ್ಞಾನಿಕ ಸಾಧನಗಳನ್ನೊಳಗೊಂಡ ಆರ್ಬಿಟರ್ ಚಂದ್ರನ ಕಕ್ಷೆ ಸೇರಿತ್ತು.
ಪ್ರಯೋಗಗಳೆಲ್ಲಾ ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದು, ಲಭ್ಯವಿರುವ ದತ್ತಾಂಶದಿಂದ ಉಡಾವಣೆ ಪೂರ್ವದಲ್ಲಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಫಲಕಾರಿಯಾಗಿದೆ ಎಂಬುದನ್ನು ಸೂಚಿಸುತ್ತದೆ. ಚಂದ್ರಯಾನ-2 ದತ್ತಾಂಶ Planetary Data System-4(PDS-4) ಮಾನದಂಡದಲ್ಲಿರಬೇಕು. ಅದನ್ನು ವೈಜ್ಞಾನಿಕ ಮತ್ತು ತಾಂತ್ರಿಕವಾಗಿ ಸಮೀಕ್ಷೆ ಮಾಡಬೇಕಾಗುತ್ತದೆ. ಅನಂತರ ಜಾಗತಿಕ ವೈಜ್ಞಾನಿಕ ಸಮುದಾಯ ಹಾಗೂ ಸಾರ್ವಜನಿಕರಿಗೆ ಹಂಚಿಕೊಳ್ಳಬಹುದಾಗಿದೆ ಎಂದು ISRO ತಿಳಿಸಿದೆ.
ಇದೀಗ ಐ.ಎಸ್.ಎಸ್.ಡಿ.ಸಿ ಆತಿಥ್ಯದ PRADAN ಪೋರ್ಟಲ್ ನಲ್ಲಿ ಚಂದ್ರಯಾನ-2 ದತ್ತಾಂಶವನ್ನು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.